ಉತ್ತರ ಪ್ರದೇಶ: ಶಾಲೆಗೆ ಯಶಸ್ಸು ಬರಬೇಕು, ಶಾಲೆಯ ಖ್ಯಾತಿ ಎಲ್ಲೆಡೆ ಹಬ್ಬಬೇಕು, ಶಿಕ್ಷಣ ಸಂಸ್ಥೆ ಏಳಿಗೆಯಾಗಬೇಕು ಎಂದು 2ನೇ ತರಗತಿಯ 11 ವರ್ಷದ ಬಾಲಕನನ್ನು ದಾರುಣವಾಗಿ ಕೊಲೆಗೈದು, ಮಾನವ ಬಲಿ ನೀಡಿರುವ ಆಘಾತಕಾರಿ ಘಟನೆ ಹತ್ರಾಸ್‌ನಲ್ಲಿ ನಡೆದಿದೆ.
ಡಿಎಲ್ ಪಬ್ಲಿಕ್ ಶಾಲೆಯ 2ನೇ ತರಗತಿಯಲ್ಲಿ ಓದುತ್ತಿದ್ದ ಕೃತಾರ್ಥ್ ಸಾವನ್ನಪ್ಪಿದ ಬಾಲಕ. ಈತನ ಮೃತದೇಹ ಪತ್ತೆಯಾಗುತ್ತಿದ್ದಂತೆ ಗ್ರಾಮದಲ್ಲಿ ಆತಂಕ, ಆಕ್ರೋಶ ಭುಗಿಲೆದ್ದಿದೆ. ಬಾಲಕನು ಅನಾರೋಗ್ಯದಿಂದ ಸಾವಿಗೀಡಾಗಿದ್ದಾನೆ ಎಂದು ಶಾಲಾ ಅಧಿಕಾರಿಗಳು ಆರಂಭದಲ್ಲಿ ಹೇಳುತ್ತಿದ್ದರೂ ಇದರ ಹಿಂದಿನ ಸತ್ಯಾಸತ್ಯತೆಯನ್ನು ಪೊಲೀಸರು ತನಿಖೆ ಮೂಲಕ ಹೊರತೆಗೆದಿದ್ದಾರೆ.
ಶಾಲೆಯ ಮ್ಯಾನೇಜರ್ ದಿನೇಶ್ ಬಘೇಲ್, ಆತನ ತಂದೆ ಜಸೋದನ್ ಸಿಂಗ್, ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್, ಶಿಕ್ಷಕರಾದ ರಾಮ್ ಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಈ ಪ್ರಕರಣದಲ್ಲಿ ಪೊಲೀಸ್ ವಶವಾಗಿದ್ದಾರೆ.
ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕುಟುಂಬಕ್ಕೆ ಸಮೃದ್ಧಿಯನ್ನು ತರುತ್ತದೆ ಎಂದು ಜಸೋದನ್ ಸಿಂಗ್ ಮತ್ತು ಬಾಘೆಲ್ ಅವರು ಮಾಟ ಮಂತ್ರ ಮಾಡಿಸಿ ಇದಕ್ಕಾಗಿ ಬಾಲಕನನ್ನು ಬಲಿಕೊಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ಹಾಸ್ಟೆಲ್‌ನಲ್ಲಿ ವಾಸವಿದ್ದ ಬಾಲಕ ಮಲಗಿದ್ದ ವೇಳೆ ಸೋಲಂಕಿ ಆತನನ್ನು ಎತ್ತಿಕೊಂಡು ಕಾಡಿಯಲ್ಲಿ ಬಲಿ ಕೊಡಲು ಕರೆದೊಯ್ದಿದ್ದಾನೆ. ಮಗು ಸಹಾಯಕ್ಕಾಗಿ ಕೂಗುತ್ತಿದ್ದಂತೆ ವೀರಪಾಲ್ ಮತ್ತು ಲಕ್ಷ್ಮಣ್ ಸಿಂಗ್ ಬಲಿ ಸರಾಗವಾಗುವಂತೆ ಖಚಿತಪಡಿಸಿಕೊಳ್ಳಲು ನಿಗಾ ಇರಿಸಿದ್ದರು. ಬಾಲಕನನ್ನು ಬರ್ಬರವಾಗಿ ಕೊಲ್ಲಲಾಗಿದ್ದು, ಅವನ ಹೆಗಲ ಮೂಳೆ ಮುರಿದಿದೆ. ಆರೋಪಿಗಳು ಬಾಲಕನ ಬಾಯಿ ಬಿಗಿದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬಾಲಕನ ಶವವನ್ನು ಬಘೇಲ್ ಕಾರಿನಲ್ಲಿಟ್ಟು ಬಿಸಾಡಲು ಸ್ಥಳ ಹುಡುಕುತ್ತಿದ್ದರು.
ಹುಡುಗನ ತಂದೆಗೆ ಅವರ ಮಗ ಅಸ್ವಸ್ಥನಾಗಿದ್ದು ವೈದ್ಯರ ಬಳಿಗೆ ಕರೆದೊಯ್ಯಲಾಗಿದೆ ಎಂದು ತಿಳಿಸಲಾಯಿತು. ಬಾಲಕನ ಕುಟುಂಬವು ಹೇಗಾದರೂ ಸದಾಬಾದ್‌ನಲ್ಲಿ ಬಘೇಲ್‌ನ ಕಾರನ್ನು ಟ್ರ‍್ಯಾಕ್ ಮಾಡಿ ಬಾಲಕನ ಮೃತ ದೇಹವನ್ನು ವಶಪಡಿಸಿಕೊಂಡಿದ್ದಾರೆ. ಬಲಿಯ ಆಚರಣೆಯ ಭಾಗವಾಗಿ ಬಾಲಕನ ಕೂದಲನ್ನು ಒಂದು ಬದಿಯಿಂದ ಕತ್ತರಿಸಲಾಗಿದೆ.