ಬೆಳ್ತಂಗಡಿ: 70ರ ದಶಕದ ಆರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ನಾಯಕತ್ವ ಮತ್ತು ನೇತೃತ್ವದಲ್ಲಿ ಜನ್ಮ ತಾಳಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) 50 ವರ್ಷಗಳನ್ನು ಪೂರೈಸಿದ್ದು ಈ ಹಿನ್ನಲೆ ಡಿ. 16ಕ್ಕೆ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ ಎಂದು ಅಧ್ಯಕ್ಷ ಬಿ.ಕೆ. ವಸಂತ್ ಬೆಳ್ತಂಗಡಿ ಹೇಳಿದರು
ಅವರು ಸೆ.25ರಂದು ಅಂಬೇಡ್ಕರ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, “ನಾಡಿನ ದಲಿತ ದಮನಿತರಿಗೆ ಧ್ವನಿಯೇ ಇಲ್ಲದ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ದಲಿತರ ಆಶಾಕಿರಣವಾಗಿ ಧೈರ್ಯ ತುಂಬಲು ಸಿಡಿದೆದ್ದ ದಲಿತ ಸಂಘರ್ಷ ಸಮಿತಿಯು 50ವರ್ಷಗಳನ್ನು ಪೂರೈಸಿದ್ದು ಈ ನಿಟ್ಟಿನಲ್ಲಿ ಡಿ.16ರಂದು ಬೆಳ್ತಂಗಡಿಯಲ್ಲಿ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ದಲಿತ ಚಳುವಳಿ ನಡೆದು ಬಂದ ಹಾದಿಯ ಅವಲೋಕನ, ಬೃಹತ್ ಮೆರವಣಿಗೆ, ಸಮಾವೇಶದ ತಾಲೂಕಿನಾದ್ಯಂತ ದಲಿತ ಚಳುವಳಿಯನ್ನು ಕಟ್ಟಲು ಶ್ರಮಿಸಿ ಅಗಲಿ ಹೋದ ಅನೇಕ ಹಿರಿಯ ಚೇತನಗಳ, ಸ್ಮರಣೆ, ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ” ಎಂದರು.
“ಗ್ರಾಮವಾರು, ಸಮುದಾಯವಾರು, ಪಕ್ಷವಾರು ಮುಖಂಡರು, ಯುವ ಕಾರ್ಯಕರ್ತರನ್ನೊಳಗೊಂಡ ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸಲಾಗಿದೆ. ಒಂದು ಚಾರಿತ್ರಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಮುದಾಯ ಪಕ್ಷ, ಸಂಘಟನೆಗಳ ಬೇಧವಿಲ್ಲದೆ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮೊದಲ ಹಂತದಲ್ಲಿ ಅಕ್ಟೋಬರ್ 20ಕ್ಕೆ ವಿಚಾರ ಸಂಕಿರಣ ಆಯೋಜಿಸಲಾಗಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಚೆನ್ನಕೇಶವ, ಶೇಖರ ಕುಕ್ಕೇಡಿ, ನೇಮಿರಾಜ್ ಕಿಲ್ಲೂರು, ಸಂಜೀವ ಆರ್. ಬೆಳ್ತಂಗಡಿ, ರಮೇಶ್ ಆರ್. ಬೆಳ್ತಂಗಡಿ, ಉಪಾಧ್ಯಕ್ಷರಾದ ಜಯಾನಂದ ಪಿಲಿಕಲ, ವೆಂಕಣ್ಣ ಕೊಯ್ಯರು, ಪಿ.ಕೆ.ರಾಜು ಪಡಂಗಡಿ, ರವಿ ಕುಮಾರ್ ಮುಂಡಾಜೆ, ಚಂದ್ರಾವತಿ ಉಜಿರೆ, ಗೌರವ ಸಲಹೆ ಗಾರರಾದ ಈಶ್ವರ ಬೈರ, ಪದ್ಮನಾಭ ಗರ್ಡಾಡಿ, ಬಾಬು ಎಂ. ಬೆಳಾಲು, ಕಾರ್ಯದರ್ಶಿಗಳಾದ ಕೂಸ ಅಳದಂಗಡಿ, ಶಿವಪ್ಪ ಗರ್ಡಾಡಿ, ಮಾಧ್ಯಮ ಸಲಹೆಗಾರ ಶೇಖರ ಎಲ್. ಲಾಯಿಲ ಮತ್ತಿತರರು ಉಪಸ್ಥಿತರಿದ್ದರು.