ಒಡಿಶಾ: ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರದ ಒಳಕೋಣೆಯೊಳಗಿನ ಅತ್ಯಮೂಲ್ಯ ವಸ್ತುಗಳು ಮತ್ತು ಆಭರಣಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಜು.18ಕ್ಕೆ ಪೂರ್ಣಗೊಂಡಿದೆ.
46 ವರ್ಷಗಳ ನಂತರ ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರದೊಳಗಿನ ಖಜಾನೆ ಮತ್ತು ಹೊರ ಖಜಾನೆಯನ್ನು ತೆರೆಯಲಾಗಿದ್ದು ಅವುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಜು.18ರಂದು ಪೂರ್ಣಗೊಂಡಿದೆ.
ಜುಲೈ 14ರಂದು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ, ಒಡಿಶಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ಸೇರಿದಂತೆ 11 ಸದಸ್ಯರ ತಂಡ ಬೆಳಗ್ಗೆ 9.51ಕ್ಕೆ ರತ್ನಭಂಡಾರವನ್ನು ತೆರೆಯಿತು. ಬಳಿಕ ಬೆಲೆಬಾಳುವ ವಸ್ತುಗಳನ್ನು ದೇವಾಲಯದ ಸಂಕೀರ್ಣದೊಳಗಿನ ತಾತ್ಕಾಲಿಕ ಸ್ಟ್ರಾಂಗ್ ರೂಮ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು. ಮೂರು ಮರದ ಅಲ್ಮೆರಾಗಳು, ಎರಡು ಮರದ ಪೆಟ್ಟಿಗೆಗಳು ಮತ್ತು ಸ್ಟೀಲ್ ಅಲ್ಮಿರಾ ಮತ್ತು ಕಬ್ಬಿಣದ ಪೆಟ್ಟಿಗೆಗಳು ಒಳಗೊಂಡಿರುವ ಏಳು ಕಂಟೇನರ್‌ಗಳಲ್ಲಿ ಆಭಣರಣಗಳನ್ನು ಸಂಗ್ರಹಿಸಲಾಗಿದೆ. ಸಂಪೂರ್ಣ ಸ್ಥಳಾಂತರ ಪ್ರಕ್ರಿಯೆಗೆ 7 ಗಂಟೆ ತೆಗೆದುಕೊಂಡಿದೆ. ನಂತರ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ಮಾರ್ಗಸೂಚಿಗಳ ಪ್ರಕಾರ, ಒಳಗಿನ ಕೋಣೆ ಮತ್ತು ತಾತ್ಕಾಲಿಕ ಸ್ಟ್ರಾಂಗ್ ರೂಮ್ ಎರಡನ್ನೂ ಲಾಕ್ ಮಾಡಿ, ಸೀಲ್ ಮಾಡಲಾಗಿದೆ. ಸ್ಟ್ರಾಂಗ್ ರೂಮ್ ಕೀಗಳನ್ನು ಪುರಿ ಜಿಲ್ಲಾಧಿಕಾರಿಗೆ ನೀಡಲಾಗಿದೆ.
46 ವರ್ಷಗಳ ನಂತರ ರತ್ನ ಭಂಡಾರವನ್ನು ತೆರೆಯಲಾಗಿರುವುದರಿಂದ ಒಳಗೆ ಹಾವಿರುವ ಸಂಶಯವಿತ್ತು. ಹೀಗಾಗಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹಾವು ಹಿಡಿಯುವವರು, ಒಡಿಶಾ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಆದರೆ, ರತ್ನಭಂಡಾರದಲ್ಲಿ ಹಾವುಗಳು ಇರಲಿಲ್ಲ. ಸಧ್ಯ ಕೊಠಡಿಯೊಳಗಿನ ಸಂಗತಿಗಳನ್ನು ಗೌಪ್ಯವಾಗಿರಿಸಲಾಗಿದೆ.
ರತ್ನಭಂಡಾರದ ದುರಸ್ತಿ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಾಡಲಿದ್ದು, ದುರಸ್ತಿ ಪೂರ್ಣಗೊಂಡ ನಂತರ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ರತ್ನಭಂಡಾರದ ಹೊರಕೋಣೆಯನ್ನು ಸ್ಥಳಾಂತರಿಸಿ ಸ್ವಚ್ಛಗೊಳಿಸಲಾಗಿದೆ.