ಬೆಂಗಳೂರು: ಡೆಂಗ್ಯೂ ಜ್ವರ ಈ ಬಾರಿ ಸಾಕಷ್ಟು ಏರಿಕೆ ಕಂಡಿದ್ದು ಈ ಹಿನ್ನಲೆ ಇದನ್ನು ಗಂಭೀರವಾಗಿ ಪರಿಗಣಿಸಿ ನೋಟಿಫೈ ಡಿಸೀಜ್ ಎಂಬುದಾಗಿ ಘೋಷಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಬದಲು ಡಿ.ಎಸ್ ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅವರು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಕಳೆದ ಬಾರಿ 25 ಸಾವಿರ ಇದ್ದರೆ ಈ ಬಾರಿ 60 ಸಾವಿರ ದಾಟಿದೆ. ಡೆಂಗ್ಯೂ ಪ್ರಕರಣದ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಮಾಡುತ್ತಿಲ್ಲ, ಗಂಭೀರವಾಗಿ ಪರಿಗಣಿಸಿದ್ದೇವೆ. ಕೋವಿಡ್ ರೀತಿ ಟ್ರ್ಯಾಕ್ ಮಾಡಲು ಸೂಚಿಸಲಾಗಿದೆ. ಒಂದೇ ಏರಿಯಾದಲ್ಲಿ ಎರಡು ಡೆಂಗ್ಯೂ ಕಂಡರೆ ಆ ಪ್ರದೇಶದಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಿದ್ದೇವೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರವೇ ದರ ನಿಗದಿಪಡಿಸಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಪರೀಕ್ಷೆ ಸರಿಯಾಗಿ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಉಚಿತ ಚಿಕಿತ್ಸೆ, ಪರೀಕ್ಷೆ ಇದ್ದು, ಖಾಸಗಿ ಆಸ್ಪತ್ರೆಯಲ್ಲಿ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.