ಬೆಳ್ತಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಕೆ ಎಸ್ ಆರ್ ಟಿ ಸಿ ಜನಸ್ಪಂದನಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರವು ಜು.01ರಂದು ಸಂತೆಕಟ್ಟೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣ ಭಾಗಗಳಾದ ಪಟ್ರಮೆ, ಅನಾರು, ಶಿಶಿಲ, ಶಿಬಾಜೆ, ಬಂದಾರು, ಕಾಯರ್ತಡ್ಕ ನಾರಾವಿ ವೇಣೂರು ಕಡೆಗಳಿಂದ ಬೆಳ್ತಂಗಡಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಓಡಾಟ ಮಾಡಬೇಕು. ಹಾಗೂ ಸಮಯಕ್ಕೆ ಸರಿಯಾಗಿ ಬಸ್ ಹೊರಡುವ ವ್ಯವಸ್ಥೆಯನ್ನು ಮಾಡಬೇಕು, ವಿದ್ಯಾರ್ಥಿಗಳು ರಸ್ತೆ ದಾಟುವ ಕಡೆಗಳಲ್ಲಿ ಝೀಬ್ರಾ ಕ್ರಾಸ್ ಹಾಗೂ ಹಂಪ್ಸ್ ಅಳವಡಿಸಬೇಕು. ಹೊಗೆ ಉಗುಳುವ ಬಸ್ ಗುಜುರಿಗೆ ಅಥವಾ ಸ್ಥಗಿತಗೊಳಸಬೇಕು, ಮೊಬೈಲ್ ಬಳಕೆ ಮಾಡದಂತೆ ತಿಳಿಸಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಬಸ್ ನಿಲ್ದಾಣಗಳ ನಿರ್ವಹಣೆ ಕಳಪೆಯಾಗಿದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಶೌಚಾಲಯದ ಸ್ವಚ್ಚತೆ ಬಗ್ಗೆ ಗಮನ ಹರಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜ ಒಂದು ವಾರದೊಳಗೆ ಇನ್ನೊಮ್ಮೆ ಅಧಿಕಾರಿಗಳ ಸಭೆ ಕರೆದು ಯಾವ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಬಹುದು ಎಂಬ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.