ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ದರ್ಶನ್ ಅಭಿಮಾನಿಗಳು: ಕುಟುಂಬಸ್ಥರ ಕಣ್ಣೀರ ಕಥೆ ಕೇಳೋರಿಲ್ಲ: ಮಕ್ಕಳನ್ನು ನೋಡಲಾಗದೆ ಹೆತ್ತವರ ಒದ್ದಾಟ

ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್‍ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಭೀಕರವಾಗಿತ್ತು. ಈಗ ಕೊಲೆ ಆರೋಪಿಗಳು ವಿಚಾರಣೆ, ಜೈಲು ಅಂತ ನೆಮ್ಮದಿಯಿಲ್ಲದೆ ಪೊಲೀಸರ ಜೊತೆ ಅಲೆದಾಡುತ್ತಿದ್ದಾರೆ. ಈ ಮಧ್ಯೆ ಅಷ್ಟೂ ಆರೋಪಿಗಳ ಪೋಷಕರು ಭಾರೀ ಸಂಕಟದ ಮಧ್ಯೆ ಒದ್ದಾಡುವಂತಾಗಿದೆ.

ಇತ್ತೀಚೆಗಷ್ಟೆ ಆರೋಪಿ ಅನುಕುಮಾರ್ ಅವರು ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ ಎಂಬ ವಿಚಾರ ತಿಳಿದು ಅವರ ತಂದೆ ನಿಧನ ಹೊಂದಿದರು. ಈಗ ಪ್ರಕರಣದ 5ನೇಆರೋಪಿ ನಂದೀಶ್‌ನ ಕುಟುಂಬದ ಕಣ್ಣೀರಿನ ಕಥೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ನಟ ದರ್ಶನ್ ಅಭಿಮಾನಿಗಳೇನು ಶ್ರೀಮಂತರಲ್ಲ. ಎಲ್ಲರು ಬಡವರೇ. ಅದರಲ್ಲಿ ನಂದೀಶ್‌ನ ಕುಟುಂಬದ ಪಾಡು ಕೇಳಿದರೆ ಅಯ್ಯೋ ಅನ್ನಿಸುತ್ತೆ.

ಆರೋಪಿ ನಂದೀಶ್ ಮಂಡ್ಯ ತಾಲೂಕಿನ ಚಾಮಲಪುರ ಗ್ರಾಮದವರು. ಜೈಲಲ್ಲಿರುವ ಮಗನನ್ನು ನೋಡಲು ಪೋಷಕರಿಗೆ ಬೆಂಗಳೂರಿಗೆ ಬರಲಾಗದೆ ಒದ್ದಾಡುತ್ತಿದ್ದಾರೆ. ನಂದೀಶ್ ತಾಯಿ ಭಾಗ್ಯಮ್ಮ ಅಸ್ತಮ ಖಾಯಿಲೆಯಿಂದ ತೀವ್ರ ಬಳಲುತ್ತಿದ್ದಾರೆ. ಸ್ನೇಹಿತರೊಬ್ಬರು ವಾಹನ ವ್ಯವಸ್ಥೆ ಮಾಡಿ ಕೊಟ್ಟರೂ ಡಿಸೇಲ್‌ಗೆ ಹಣ ಹೊಂದಿಸಲಾಗಿಲ್ಲ. ಮಾಧ್ಯಮದವರನ್ನ ಹೊರತುಪಡಿಸಿ ಮನೆ ಬಳಿಗೆ ಸೌಜನ್ಯಕ್ಕೂ ದರ್ಶನ್ ಅಭಿಮಾನಿಗಳು, ಆಪ್ತರು ಭೇಟಿ ನೀಡಿಲ್ಲ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.

ಬೆಂಗಳೂರಿಗೆ ಬರೋಕೆ ಹಣವಿಲ್ಲ. ವಕೀಲರನ್ನ ನೇಮಿಸಿಕೊಳ್ಳೋಕು ಸಾಧ್ಯವಿಲ್ಲ, ಒಂದುವೇಳೆ ನೇಮಿಸಿದರೂ ಅವರಿಗೆ ಹಣ ನೀಡೋದು ಕಷ್ಟ ಸಾಧ್ಯ. ಒಟ್ಟಿನಲ್ಲಿ ಮಗ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಾಗಿಂದ ಇಡೀ ಕುಟುಂಬ ಕಂಗಾಲಾಗಿದೆ.

error: Content is protected !!