‘ನಟ ದರ್ಶನ್ ಕೊಲೆ ಮಾಡುವ ವ್ಯಕ್ತಿಯಲ್ಲ: ಜೊತೆಗಿರುವವರು ಕೊಲೆ ಮಾಡಿ ದರ್ಶನ್ ಮೇಲೆ ಆರೋಪ ?: ನಾವ್ಯಾರೂ ದರ್ಶನ್ ರಕ್ಷಣೆಗಾಗಿ ಸಿಎಂ ಬಳಿ ಹೋಗಿಲ್ಲ’ : ಶಾಸಕ ಉದಯ್ ಗೌಡ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಸೆರೆಯಾಗಿರುವ ನಟ ದರ್ಶನ್ ಪೊಲೀಸ್ ವಿಚಾರಣೆಯಲ್ಲಿ ಬೇಸೆತ್ತಿದ್ದಾರೆ. ಆದರೆ ನಟನ ಪರವಾಗಿ ಅಭಿಮಾನಿಗಳ ಹೊರತು ಬೇರೆ ಯಾರು ಮಾತನಾಡುತ್ತಿಲ್ಲ. ಆದರೆ ಸದ್ಯ ಮದ್ದೂರು ಕ್ಷೇತ್ರದ ಶಾಸಕ ಉದಯ್ ಗೌಡ ನಟ ದರ್ಶನ್ ಕೊಲೆ ಮಾಡುವ ವ್ಯಕ್ತಿಯಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ದರ್ಶನ್ ಬಗ್ಗೆ ಮಾತನಾಡಿರುವ ಅವರು ‘ದರ್ಶನ್ ನನಗೆ ಉತ್ತಮ ಸ್ನೇಹಿತ. ಅವರಿಗೆ ಸಿಟ್ಟು, ಸ್ವಲ್ಪ ಮುಂಗೋಪ ಇದೆಯೇ ಹೊರತು ಕೊಲೆ ಮಾಡುವ ವ್ಯಕ್ತಿಯಲ್ಲ. ಆದರೆ, ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿದ್ರಾ? ಇವರ ಮೇಲೆ ಏನಾದ್ರೂ ಹಾಕಿದ್ರಾ ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ ಹೇಳೋಕೆ ಆಗುವುದಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ತನಿಖೆ ಆಗಲಿ, ಸತ್ಯ ಹೊರಗೆ ಬರಲಿ. ಇನ್ನೇನು ಕೆಲವೇ ದಿನಗಳಲ್ಲಿ ಹೊರಬರುತ್ತದೆ. ರಾಜ್ಯದ ಜನರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ದರ್ಶನ್ ರಕ್ಷಣೆಗೆ ರಾಜಕೀಯ ಪ್ರಭಾವ ಬಳಕೆ ಆಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವ್ಯಾರೂ ದರ್ಶನ್ ರಕ್ಷಣೆ ಮಾಡುವಂತೆ ಸಿಎಂ ಬಳಿ ಹೋಗಿಲ್ಲ. ಈ ಪ್ರಕರಣ ನಡೆದು ಹದಿನೈದು ದಿನ ಆಗಿದೆ. ಒಂದು ವೇಳೆ ಆ ರೀತಿ ಮಾಡಿದ್ರೆ ಹೀಗೆ ನಡೆಯುತ್ತಿರಲಿಲ್ಲ ಎಂದು ದರ್ಶನ್ ಪರವಾಗಿ ಸಿಎಂ ಜೊತೆಗೆ ಲಾಬಿ ನಡೆಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

error: Content is protected !!