ಸಂಶಯಾಸ್ಪದ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ಪತ್ತೆ: ನಿಷ್ಪಕ್ಷ ತನಿಖೆ ನಡೆಸುವಂತೆ ರಮಾನಾಥ ರೈ ಒತ್ತಾಯ:

 

 

 

 

 

ಬಂಟ್ವಾಳ : ವಾಮದಪದವಿನಲ್ಲಿ ಅನುಮಾನಾಸ್ಪದವಾಗಿ ಕೊಳೆತ ಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಚೆನ್ನೈತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಮದಪದವು ತಿಮರಡ್ಡ ನಿವಾಸಿ ಪದ್ಮನಾಭ ಸಾಮಂತ್ (34) ಎಂದು ಗುರುತಿಸಲಾಗಿದೆ.

ಪದ್ಮನಾಭ ಸಾಮಂತ್ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿದ್ದು, ಭಾನುವಾರ ಬೆಳಗ್ಗೆ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದರು.ಈ ಸಂದರ್ಭ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ರಮಾನಾಥ ರೈ, ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆ ನಡೆಸುವಂತೆ ಒತ್ತಾಯಿಸಿದರು. ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಾಮಂತ್ ಹೇಳುತ್ತಿದ್ದರು. ಅದರಿಂದೇನಾದರೂ ಸಾವನ್ನಪ್ಪಿದನೇ ಅಥವಾ ಬೇರೆ ಯಾವ ಕಾರಣ ಕೃತ್ಯ ನಡೆದಿರಬಹುದು ಎಂಬ ಸಂಶಯಗಳು ನಿವಾರಣೆಯಾಗಬೇಕು ಎಂದರು.

ಮೃತರ ಸಹೋದರ ನೀಡಿದ ದೂರಿನಂತೆ, ಪದ್ಮನಾಭ ಅವರು ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದು, ಮನೆಗೆ 2-3 ದಿನಗಳಿಗೊಮ್ಮೆ ಬರುತ್ತಿದ್ದರು. ಮಾರ್ಚ್ 28ರಂದು ಪದ್ಮನಾಭ ಸಾಮಂತ್​ ಮನೆಯಲ್ಲಿರದೆ ಮೋಟಾರು ಸೈಕಲ್ ಮಾತ್ರ ಮನೆಯಲ್ಲಿದ್ದು, ರಾತ್ರಿ ದೂರವಾಣಿ ಕರೆಮಾಡಿದಾಗ ಕರೆಯನ್ನು ಸ್ವೀಕರಿಸಿರಲಿಲ್ಲ.ಮಾರ್ಚ್ 31ರಂದು ಬೆಳಗ್ಗೆ ಮೃತದೇಹ ಗುಡ್ಡದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದಿದೆ ಎಂದು ದೂರು ನೀಡಿದ್ದಾರೆ. ಈ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ 174 (3)(vi) ಸಿಆರ್​ಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!