ಬೆಂಗಳೂರು: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಧರ್ಮದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ಎ ಮತ್ತು ಬಿ ಶ್ರೇಣಿಯ ದೇಗುಲಗಳ ಆದಾಯದ ಹಣವನ್ನು ಸಿ ಶ್ರೇಣಿಯ ದೇವಾಲಯಗಳ ಅಭಿವೃದ್ಧಿಗೆ ಬಳಸುವುದು ಮತ್ತು ಶ್ರೀಮಂತ ದೇಗುಲಗಳಿಗೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಎರಡೆರಡು ಬಾರಿ ವಿಧಾನಸಭೆಯಲ್ಲಿ ಮಂಡನೆ ಮಾಡಿ ಕಾಂಗ್ರೆಸ್ ಸರ್ಕಾರ ಅನುಮೋದನೆ ಪಡೆದಿತ್ತು. ಆದರೆ ಈ ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹಿ ಹಾಕದೇ ವಾಪಸ್ ಕಳುಹಿಸಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.
ವಾರ್ಷಿಕವಾಗಿ 10 ಲಕ್ಷ ರೂಪಾಯಿಯಿಂದ ಒಂದು ಕೋಟಿ ರೂಪಾಯಿಯವರೆಗೆ ಆದಾಯವಿರುವ ದೇವಾಲಯಗಳಿಗೆ ಶೇಕಡ 5ರಷ್ಟು ಮತ್ತು 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಇರುವ ದೇಗುಲಗಳಿಗೆ ಶೇಕಡ 10ರಷ್ಟು ತೆರಿಗೆ ವಿಧಿಸುವ ಧಾರ್ಮಿಕ ದತ್ತಿ, ಧರ್ಮಾದಾಯ ತಿದ್ದುಪಡಿ ಮಸೂದೆ ಇದಾಗಿದೆ. ತಿದ್ದುಪಡಿ ಮಸೂದೆಯನ್ನು ಸಚಿವ ರಾಮಲಿಂಗಾ ರೆಡ್ಡಿ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್‍ನಲ್ಲಿ ಮಂಡಿಸಿದ್ದರು. ಆದರೆ, ಅದಕ್ಕೆ ಸೋಲಾಗಿತ್ತು. ಹೀಗಾಗಿ, ವಿಧಾನಸಭೆಯಲ್ಲಿ ಎರಡೆರಡು ಬಾರಿ ಮಂಡಿಸಿ, ಅನುಮೋದನೆ ಪಡೆದುಕೊಂಡು, ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಮಸೂದೆಗೆ ಸಹಿ ಹಾಕದೆ ವಾಪಸ್ ಕಳುಹಿಸಿರುವ ರಾಜ್ಯಪಾಲರು ಕೆಲವೊಂದು ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.