ಲೋಕಸಭಾ ಚುನಾವಣೆ 2024: ಇಂದು ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ ಸಾಧ್ಯತೆ: ಬೆಳ್ತಂಗಡಿಗೆ ಒಲಿಯಲಿದೆಯೇ ಈ ಬಾರಿಯ ಎಂ.ಪಿ. ಟಿಕೇಟ್..?

ಬೆಳ್ತಂಗಡಿ: ಒಂದೆಡೆ ಬಿಸಿಲಿನ ತಾಪ ದಿನದಿಂದ ದಿನೇ ಹೆಚ್ಚುತಿದ್ದರೆ ಮತ್ತೊಂದೆಡೆ ಲೋಕಸಭಾ ಚುನಾವಣೆಯ ಕಾವು ಇನ್ನಷ್ಟು ಏರತೊಡಗಿದೆ. ಕೆಲವೇ ದಿನಗಳಲ್ಲಿ 2024 ರ ಲೋಕಸಭಾ ಚುನಾವಣೆಯ ದಿನಾಂಕ ಚುನಾವಣಾ ಆಯೋಗ ಪ್ರಕಟಿಸಲಿದ್ದು. ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ಭರ್ಜರಿ ತಯಾರಿಗೆ ಮುಂದಾಗಿವೆಯಾದರೂ ಅಭ್ಯರ್ಥಿಗಳು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈಗಾಗಲೇ ಬಿಜೆಪಿ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಎರಡನೇ ಪಟ್ಟಿ ಇವತ್ತು ಬಿಡುಗಡೆ ಮಾಡುವ ಬಗ್ಗೆ ಹಿರಿಯ ನಾಯಕರು ಮಾಹಿತಿ ಹಂಚಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂ.ಪಿ. ಟಿಕೇಟ್ ಯಾರಿಗೆ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆಯ ನಡುವಲ್ಲೇ ಬೆಳ್ತಂಗಡಿಗೆ ಈ ಬಾರಿಯ ಎಂ.ಪಿ. ಟಿಕೇಟ್ ಎಂಬ ಸುದ್ಧಿಗಳು ಎಲ್ಲೆಡೆಯೂ ಹರಿದಾಡುತ್ತಿದೆ.

ಮಂಗಳೂರು ಲೋಕಸಭಾ ಚುನಾವಣೆಗೆ 5 ಮಂದಿ ಪ್ರಭಾವಿಗಳು ಟಿಕೇಟ್ ಆಕಾಂಕ್ಷಿಗಳಾಗಿದ್ದು ಯಾರಿಗೆ ಟಿಕೇಟ್ ಸಿಗಲಿದೆ ಎಂಬುವುದು ಕುತೂಹಲ ಕೆರಳಿಸಿದೆ. ಕಳೆದ 3 ದಶಕಗಳಿಂದ ಬಿಜೆಪಿ ಆಭ್ಯರ್ಥಿಗಳು ದ.ಕ. ಜಿಲ್ಲೆಯಲ್ಲಿ ಜಯಗಳಿಸುತಿದ್ದಾರೆ.ಈಗಾಗಲೇ 3 ಬಾರಿ ಗೆದ್ದಿರುವ ನಳೀನ್ ಕುಮಾರ್ ಕಟೀಲು 4 ನೇ ಬಾರಿಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ.ಅದರೆ ಇವರ ಜೊತೆಯಲ್ಲಿ ಸತ್ಯಜಿತ್ ಸುರತ್ಕಲ್, ಅರುಣ್ ಕುಮಾರ್ ಪುತ್ತಿಲ , ಬೃಜೇಶ್ ಚೌಟ, ನಾಗರಾಜ್ ಶೆಟ್ಟಿ ಆಕಾಂಕ್ಷಿಗಳಾಗಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸತ್ಯಜಿತ್ ಸುರತ್ಕಲ್ ಜಿಲ್ಲೆಯಾದ್ಯಂತ ಜನಾಂದೋಲನಾ ಸಭೆಯ ಮೂಲಕ ಪಕ್ಷದ ಪ್ರಮುಖರ ಗಮನವನ್ನು ಸೆಳೆಯುವ ಕಾರ್ಯ ಮಾಡುತಿದ್ದಾರೆ. ಸಾಮಾನ್ಯ ಕರ್ತನಾಗಿದ್ದ ನಳಿನ್ ಕುಮಾರ್ ಕಟೀಲು ಅವರನ್ನು ಚುನಾವಣಾ ಕಣಕ್ಕಿಳಿಸಿ ಆಶ್ಚರ್ಯ ಮೂಡಿಸಿದ ಬಿಜೆಪಿ ಈ ಬಾರಿ ಮತ್ತೊಮ್ಮೆ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ಮಾಹಿತಿಯ ಪ್ರಕಾರ ಎಬಿವಿಪಿ, ಸಂಘ ಪರಿವಾರ, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಬೆಳ್ತಂಗಡಿಯ ಕಾರ್ಯಕರ್ತರೊಬ್ಬರ ಹೆಸರೂ ಕೂಡ ಪಟ್ಟಿಯಲ್ಲಿದೆ ಎಂಬುವುದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಅದಲ್ಲದೇ ಬಿಲ್ಲವ ಸಮುದಾಯಕ್ಕೆ ಸೇರಿದವರಾದ ಇವರಿಗೆ ಟಿಕೇಟ್ ನೀಡಿದ್ದಲ್ಲಿ ಸತ್ಯಜಿತ್ ಸುರತ್ಕಲ್ ಅವರ ಬಂಡಾಯವನ್ನು ಸುಲಭವಾಗಿ ಎದುರಿಸಬಹುದು ಎಂಬುವುದು ಕೂಡ ಪಕ್ಷದ ಲೆಕ್ಕಾಚಾರವಾಗಿದೆ. ಹಿಂದೆ ಸಾಮಾನ್ಯ ಕಾರ್ಯಕರ್ತ ನಳೀನ್ ಕುಮಾರ್ ಗೆ ಟಿಕೇಟ್ ನೀಡಿ ಗೆಲ್ಲಿಸಿದ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಮತ್ತೊಮ್ಮೆ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಏನಿದ್ದರೂ ಪಕ್ಷದ ಹೈಕಮಾಂಡ್ ಯಾವ ಅಭ್ಯರ್ಥಿಯನ್ನು ಸೂಚಿಸಿದರೂ ಆ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಿದೆ.

error: Content is protected !!