ಪುತ್ತೂರು: ಡಾಂಬರ್ ಗೆ ಬಿದ್ದು ಒದ್ದಾಡುತ್ತಿದ್ದ ನಾಗರ ಹಾವನ್ನು ಪುತ್ತೂರಿನ ಉರಗಪ್ರೇಮಿ ತೇಜಸ್ ಬನ್ನೂರು ರಕ್ಷಿಸಿದ್ದಾರೆ.
ಮನೆಯೊಂದರ ಬಳಿ ಡಾಂಬರ್ ಡಬ್ಬದಿಂದ ನೆಲಕ್ಕೆ ಹರಿದಿದ್ದ ಡಾಂಬರ್‌ನಲ್ಲಿ ನಾಗರ ಹಾವು ಬಿದ್ದಿದ್ದು, ಈ ಬಗ್ಗೆ ಮನೆಮಂದಿ ಉರಗಪ್ರೇಮಿ ತೇಜಸ್ ಬನ್ನೂರು ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅವರು ಹಾವನ್ನು ರಕ್ಷಿಸಿದ್ದಾರೆ. ಈ ವೇಳೆ ಹಾವಿನ ಚರ್ಮಕ್ಕೆ ಡಾಂಬರ್ ಅಂಟಿರುವುದನ್ನು ಗಮನಿಸಿದ ಅವರು ಹಾವನ್ನು ಬೇರೊಂದು ಕಡೆಗೆ ವರ್ಗಾಯಿಸಿ ಚರ್ಮದಿಂದ ಡಾಂಬರ್ ತೆಗೆಯುವ ಪ್ರಯತ್ನ ಮಾಡಿದ್ದಾರೆ.
ಒಂದು ದಿನ ಸಂಪೂರ್ಣ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಹಾವನ್ನು ಅದ್ದಿಟ್ಟು ಬಳಿಕ ಅದರ ಮೇಲಿಂದ ಡಾಂಬರ್‌ನ್ನು ಬೇರ್ಪಡಿಸಿದ್ದಾರೆ. ಸದ್ಯ ನಾಗರಹಾವು ಚೇತರಿಸಿಕೊಂಡಿದ್ದು, ಹಾವಿನ ಎಲ್ಲ ಚಲನವಲನಗಳನ್ನು ಪರೀಕ್ಷಿಸಿದ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.