ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಯ ಸಭೆ: ದಲಿತ ಮುಖಂಡರಿಂದ ಆಕ್ರೋಶ..!

ಬೆಳ್ತಂಗಡಿ : ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಸೆ.24ರಂದು ನಡೆಯಿತು.

ಸಭೆಯಲ್ಲಿ ಮಾತನಾಡಿದ ಶೇಖರ್ ಲಾಯಿಲ, ಬೀಟ್ ಪೋಲಿಸರು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ , ಇದರಿಂದಾಗಿ ಆಗಾಗ ಸಮಸ್ಯೆ ಉದ್ಭವಿಸುತ್ತದೆ. ಬೀಟ್ ಪೋಲಿಸರಿಗೆ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ವೆಂಕಣ್ಣ ಕೊಯ್ಯುರುರವರು ಮಾತನಾಡಿ ದಲಿತ ಕಾಲನಿ ಸಮೀಪ ಅಂಗಡಿಗಳಲ್ಲಿ ಯಥೇಚ್ಛವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಮೌನವಾಗಿದೆ. ಇದರಿಂದಾಗಿ ದಿನನಿತ್ಯ ದಲಿತ ಕಾಲನಿಗಳಲ್ಲಿ ಗಲಾಟೆ ನಡೆಯುತ್ತದೆ ಎಂದು ದೂರಿದ ಅವರು ಇಲಾಖೆಗಳು ದಾಳಿ ನಡೆಸುವ ಮೊದಲೇ ಅಕ್ರಮ ದಂಧೆಕೋರರಿಗೆ ಮಾಹಿತಿ ನೀಡುವ ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ದಲಿತ ಮುಖಂಡರು ಅಕ್ರಮ ದಂಧೆಕೋರರ ಬಗ್ಗೆ ಧ್ವನಿ ಎತ್ತುವವರ ಮಾಹಿತಿಯನ್ನು ಬಹಿರಂಗ ಪಡಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ವ್ಯಕ್ತಿಯೊಬ್ಬರಿಗೆ ಜಮೀನು ಮಾರಾಟ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಆಗಸ್ಟ್ 29 ರಂದು ದೂರು ನೀಡಿದರೂ ಇಂದಿಗೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು. ಜೊತೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ಮಾನಸಿಕ ಅಸ್ವಸ್ಥರು , ಭಿಕ್ಷೆ ಬೇಡುವವರಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಗಮನ ಸೆಳೆಯಲಾಯಿತು.

ದಲಿತ ಕಾಲನಿಗಳ ಸಮೀಪ ಅಪರಿಚಿತರು ಹೆಣ್ಣು ಮಕ್ಕಳನ್ನು ಚುಡಾಯಿಸುವ ಗಂಭೀರ ಸ್ವರೂಪದ ಸಮಸ್ಯೆಗಳ ಬಗ್ಗೆ ಪೆÇೀಲಿಸ್ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಿಲ್ಲ ಎಂದು ಬಿ.ಕೆ ವಸಂತ ಆರೋಪಿಸಿದರು. ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವ , ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವ ಬಗ್ಗೆ ಮಾಹಿತಿ ನೀಡಿ ತಕ್ಷಣ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ದಲಿತ ಕಾಲನಿ ಸೇರಿದಂತೆ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ದಲಿತ ಕಾಲನಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ ಸ್ವಾಗತಿಸಿ, ಸಿಬ್ಬಂದಿ ಆನಂದ್ ಧನ್ಯವಾದವಿತ್ತರು.

error: Content is protected !!