ನವದೆಹಲಿ: ಹುಟ್ಟಿನಿಂದಲೇ ಪರಸ್ಪರ ಅಂಟಿಕೊಂಡಿದ್ದ ಇಬ್ಬರು ಮಕ್ಕಳನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಸತತ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಮೂಲದ ದೀಪಿಕಾ ಮತ್ತು ಅಂಕುರ್ ಗುಪ್ತಾ ದಂಪತಿಗೆ ರಿದ್ಧಿ ಮತ್ತು ಸಿದ್ಧಿ ಎಂಬ ಅವಳಿ ಹೆಣ್ಣು ಮಕ್ಕಳು ಜನಿಸಿದ್ದರು. ದೀಪಿಕಾ ಗುಪ್ತಾ ಅವರ ಗರ್ಭಧಾರಣೆಯ ನಾಲ್ಕನೇ ತಿಂಗಳಲ್ಲಿ ಥೋರಾಕೊ-ಆಂಫಾಲೋಪಾಗಸ್ ಸಂಯೋಜಿತ ಅವಳಿಗಳೆಂದು ಜನನದ ಮೊದಲೇ ಗುರುತಿಸಲಾಗಿತ್ತು. ಕಳೆದ ವರ್ಷ ಜುಲೈ 7ರಂದು ಜನಿಸಿದ ಮಕ್ಕಳು ಐದು ತಿಂಗಳ ಕಾಲ ಐಸಿಯುನಲ್ಲಿದ್ದರು. ಈ ಮಕ್ಕಳ ಎದೆ ಮತ್ತು ಹೊಟ್ಟೆ ಭಾಗಗಳು ಕೂಡಿಕೊಂಡಿದ್ದವು. ಜೂನ್ 8ರಂದು ಏಮ್ಸ್ ವೈದ್ಯರು ಒಂದು ವರ್ಷದ ಸಯಾಮಿ ಮಕ್ಕಳ ಶಸ್ತ್ರಚಿಕಿತ್ಸೆ ನಡೆಸಿ ಬೇರ್ಪಡಿಸಿದ್ದಾರೆ. ಇಬ್ಬರು ಸಹೋದರಿಯರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ಶಸ್ತ್ರಚಿಕಿತ್ಸೆಯಿಂದ ಅವರು ಯಾವುದೇ ಸಮಸ್ಯೆ ಎದುರಿಸುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವಳಿಗಳು ತಮ್ಮ ಮೊದಲ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲೇ ಆಚರಿಸಿಕೊಂಡರು.