ಸಮಾಜಮುಖಿ ಕಾರ್ಯದೊಂದಿಗೆ ತಾಲೂಕಿನ ಇಲಾಖೆ, ಸಾರ್ವಜನಿಕರಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ: ಶಿಷ್ಟಾಚಾರದಂತೆ ಆ.13ರಂದು ಬೆಳಗ್ಗೆ ಮನೆಗಳಲ್ಲಿ ಧ್ವಜಾರೋಹಣ, 15ರಂದು ಸಂಜೆ ಅವರೋಹಣ: ಗ್ರಾಮ ಪಂಚಾಯತ್ ಗಳಲ್ಲಿ 75 ಫಲಾನುಭವಿಗಳಿಗೆ ಸಲಕರಣೆ ವಿತರಣೆ: ಆ.15ರಂದು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಸಭಾ ಕಾರ್ಯಕ್ರಮ: ಅಮೃತಮಹೋತ್ಸವ ಆಚರಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಮಾಹಿತಿ

 

 

 

ಬೆಳ್ತಂಗಡಿ: ಕೇಂದ್ರ ಸರಕಾರದ ಸೂಚನೆಯಂತೆ ಆಗಸ್ಟ್ 13ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕಿನ ಪ್ರತಿ ಮನೆಯಲ್ಲೂ ಧ್ವಜಾರೋಹಣ ಹಾಗೂ ಆಗಸ್ಟ್ 15ರ ಸಂಜೆ 5ಕ್ಕೆ ಗೌರವಯುತವಾಗಿ ಧ್ವಜಾಅವರೋಹಣ ನಡೆಸಲಾಗುವುದು. ‘ಹರ್ ಘರ್ ತಿರಂಗ ಅಭಿಯಾನ’ ಮನೆ ಮನೆಗಳಿಗೂ ತಲುಪಿದ್ದು, ನಾವೆಲ್ಲರೂ ಒಗ್ಗೂಡಿ ಆಚರಿಸುವ ಮ‌ೂಲಕ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಎಂಬ ಸಂದೇಶವನ್ನು ಜಗತ್ತಿಗೆ ಸಾರಬೇಕು. ಇದರೊಂದಿಗೆ ನಾವೆಲ್ಲರೂ ತಾಯಿ ಭಾರತಿಗೆ ಅಮೃತದ ಗೌರವ ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಆ 15 ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಬಗ್ಗೆ ಗುರುವಾಯನಕೆರೆ ನವಶಕ್ತಿ ರೆಸಿಡೆನ್ಸಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸಹಭಾಗಿತ್ವದಲ್ಲಿ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ನಡೆಯಲಿದೆ ಎಂದು ಮಾಹಿತಿ ‌ನೀಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದಡಿ ದೇಶದಲ್ಲಿ, ರಾಜ್ಯದಲ್ಲಿ ಹಲವು ಬಗೆಯ ವೈವಿದ್ಯಮಯ ವಿವಿಧ ವಲಯಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಜಾರಿಯಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಆಗಸ್ಟ್ 15ರಂದು ದೇಶದೆಲ್ಲೆಡೆ ನಡೆಯುವಂತೆ, ಬೆಳ್ತಂಗಡಿಯಲ್ಲೂ ನಡೆಯಲಿದ್ದು ಈ ಕಾರ್ಯಕ್ರಮ ಜನಮಾನಸದಲ್ಲಿ ಅವಿಸ್ಮರಣೀಯವಾಗಿ ಉಳಿಯುವಂತೆ ಮಾಡಲು ತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದ್ದೇವೆ.

ವರ್ಷಂಪ್ರತಿಯಂತೆ ತಾಲೂಕು ಕಚೇರಿಯಲ್ಲಿ ಬೆಳಿಗ್ಗೆ ರಾಷ್ಟ್ರೀಯ ಹಬ್ಬಗಳ ಶಿಷ್ಟಾಚಾರದಂತೆ ಧ್ವಜಾರೋಹಣ ಕಾರ್ಯಕ್ರಮ ನಡೆದು, ಬಳಿಕ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು 750 ದ್ವಿ ಚಕ್ರ ವಾಹನದ ಜಾಥಾ ಮೂಲಕ ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನಕ್ಕೆ ತೆರಳಿ ಅಲ್ಲಿ 10 ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಖ್ಯಾತ ಚಿಂತಕರಾದ ಪ್ರಕಾಶ್ ಮಲ್ಪೆ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಸರ್ಕಾರದ ಇಲಾಖೆಗಳಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಗುವುದು.

ಕಂದಾಯ ಇಲಾಖೆಯಿಂದ 750 ಆರ್ಹ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ, ಪಿಂಚಣಿ ಯೋಜನೆಯಲ್ಲಿ 750 ಜನರಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ನಿಧಿ ವಿತರಣೆ, ತಾಲೂಕು ಪಂಚಾಯತ್‌ ವತಿಯಿಂದ 75 ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, 75 ಅಂಗನವಾಡಿಗೆ ಗ್ರಾಮ ಪಂಚಾಯತ್ ನಿಧಿಯಿಂದ ತೂಕದ ಯಂತ್ರ ಹಾಗೂ ತಾಲೂಕು ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಪಶುಸಂಗೋಪನೆ ಇಲಾಖೆಯಿಂದ ಪುಣ್ಯಕೋಟಿ ಯೋಜನೆಗೆ ಚಾಲನೆ, ದನದ ಕೊಟ್ಟಿಗೆಗೆ 75 ಮ್ಯಾಟ್ ವಿತರಣೆ, 75 ಜಾನುವಾರುಗಳಿಗೆ ವಿಮಾ ಸೌಲಭ್ಯ, ಸಂಚಾರಿ ಪಶು ಚಿಕಿತ್ಸಾಲಯ ಉದ್ಘಾಟನೆ. ಶಿಕ್ಷಣ ಇಲಾಖೆಯಿಂದ 75 ಎಸ್.ಎಸ್.ಎಲ್.ಸಿ ಸಾಧಕರಿಗೆ ಟ್ಯಾಬ್‌ ವಿತರಣೆ ಹಾಗೂ ಅರಣ್ಯ ಇಲಾಖೆ ಸಹಯೋಗದಿಂದ ಶಾಲೆಗಳಿಗೆ 75 ಡೆಸ್ಕ್ ಬೆಂಚ್ ವಿತರಣೆ. ಕೃಷಿ ಇಲಾಖೆಯಿಂದ 75 ರೈತರಿಗೆ ತೋಟಗಾರಿಕಾ ಬೆಳೆಗಳ ಗಿಡ ವಿತರಣೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 75 ಮಂದಿಗೆ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ವಿತರಣೆ, ಅರಣ್ಯ ಇಲಾಖೆಯಿಂದ ಫಲಾನುಭವಿಗಳಿಗೆ 750 ರಕ್ತ ಚಂದನ, ಶ್ರೀಗಂಧ, ಸಾಗುವಾನಿ ಗಿಡ ವಿತರಣೆ, ಬೆಳ್ತಂಗಡಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ 75 ವಿವಿಧ ತಳಿಯ ಗಿಡ ನೆಡುವ ಕಾರ್ಯಕ್ರಮ,

ಮೆಸ್ಕಾಂ ಇಲಾಖೆಯಿಂದ ಮೆಸ್ಕಾಂ ಬೆಳ್ತಂಗಡಿ ಹಾಗೂ ಉಜಿರೆ ಉಪ ವಿಭಾಗ ಮತ್ತು ವಿದ್ಯುತ್ ಗುತ್ತಿಗೆದಾರರ ಸಂಘ, ಬೆಳ್ತಂಗಡಿ ವತಿಯಿಂದ 75 ಅಂಗನವಾಡಿಗಳಿಗೆ ಫ್ಯಾನ್ ವಿತರಣೆ. ಸರ್ವೇ ಇಲಾಖೆಯಿಂದ 75 ಪೋಡಿ ಕಡತಗಳ ವಿಲೇವಾರಿ, ಪೊಲೀಸ್ ಇಲಾಖೆಯಿಂದ 23 ಹಾಸ್ಟೆಲ್ ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಾಲೂಕಿಗೆ ಸಂಬಂಧಿಸಿದ ಪುಸ್ತಕಗಳ ವಿತರಣೆ, ಕಾರ್ಮಿಕ ಇಲಾಖೆಯಿಂದ 75 ಜನ ವಿವಿಧ ಕಾರ್ಮಿಕ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ, ವಿಕಲಚೇತನ ಕಲ್ಯಾಣ ಇಲಾಖೆಯಿಂದ 75 ಜನ ವಿಶೇಷ ಚೇತನರಿಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆ, ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ಸ್ವ ಉದ್ಯೋಗಾಸಕ್ತ 75 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ತಾಲೂಕು ವೈನ್ಸ್ ಮರ್ಚೆಂಟ್ ಅಸೋಸಿಯೇಷನ್ ಸಹಯೋಗದೊಂದಿಗೆ 75 ಕೃಷಿಕರಿಗೆ ಕಳೆಕೊಚ್ಚುವ ಯಂತ್ರ ವಿತರಣೆ, ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರ ಭಕ್ತಿಯನ್ನು ಉದ್ದೀಪನಗೊಳಿಸುವ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಕೇಂದ್ರ ಸ್ಥಾನದಲ್ಲಿ ಈಎಲ್ಲಾ ಕಾರ್ಯಕ್ರಮಗಳಲ್ಲದೇ ತಾಲೂಕಿನ 48 ಗ್ರಾಮ ಪಂಚಾಯತ್ ಗಳಲ್ಲೂ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಊರ ಹಿರಿಯರು ಮಾಜಿ ಸೈನಿಕರನ್ನು ಒಗ್ಗೂಡಿಸಿ ಸ್ಥಳೀಯ ಮಟ್ಟದಲ್ಲಿ 75 ಫಲಾನುಭವಿಗಳಿಗೆ ಸಾಧನ ಸಲಕರಣೆ ಸವಲತ್ತು ಸೌಲಭ್ಯ ವಿತರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್, ಸಿಡಿಪಿಒ ಪ್ರಿಯಾ ಆಗ್ನೇಸ್ ಚಾಕೋ, ಸಮಾಜ ಕಲ್ಯಾಣ ಇಲಾಖೆಯ ಹೇಮಚಂದ್ರ, ಬಿಸಿಎಮ್ ಇಲಾಖೆಯ ಜೋಸೆಫ್,‌ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ತೋಟಗಾರಿಕಾ ಇಲಾಖೆಯ ಚಂದ್ರಶೇಖರ, ಪಶುಸಂಗೋಪನೆ ಇಲಾಖೆಯ ಮಂಜು ನಾಯ್ಕ್, ಸರಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಸುಕುಮಾರ್ ಜೈನ್ ಇವರು ಉಪಸ್ಥಿತರಿದ್ದರು.

error: Content is protected !!