ಶ್ರೀ ನಾರಾಯಣ ಗುರುಗಳಿಗೆ ಅವಮಾನ ಜು 04 ರಂದು ಸರ್ಕಾರದ ಹಠಮಾರಿ ಧೋರಣೆಯ ವಿರುದ್ಧ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ

 

ಬೆಳ್ತಂಗಡಿ :ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಮತ್ತೆ 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರಿಸದೇ ಮತ್ತು ಅವರ ಅನುಯಾಯಿಗಳಿಗೆ ಅವಮಾನ ಮಾಡಿರುವ ರಾಜ್ಯ ಸರಕಾರದ ಹಠಮಾರಿ ದೋರಣೆಯ ವಿರುದ್ಧ ಜುಲೈ 04 ರಂದು ಬೆಳ್ತಂಗಡಿ ಬಸ್ಸು ತಂಗುದಾಣದ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಂದು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಚಿದಾನಂದ ಎಲ್ದಕ್ಕ ಹೇಳಿದರು. ಅವರು ಬೆಳ್ತಂಗಡಿ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಸವಣ್ಣ, ಡಾ! ಬಿ. ಆರ್ ಅಂಬೇಡ್ಕರ್, ಕುವೆಂಪು ಸೇರಿದಂತೆ ನಾಡಿನ ವಿವಿಧ ಸಮಾಜ ಸುಧಾರಕರ ಕುರಿತು ಪಠ್ಯ ಪರಿಷ್ಕರಣೆಯಲ್ಲಿ ಆಗಿರುವ ತಪ್ಪುಗಳಿಗೆ ಸಮಾಜದ ವಿವಿಧ ವಲಯಗಳಿಂದ ಕೇಳಿ ಬಂದ ವಿರೋಧಗಳಿಗೆ ಸ್ಪಂದಿಸಿರುವ ಶಿಕ್ಷಣ ಇಲಾಖೆ ಎಂಟು ತಿದ್ದುಪಡಿ ಮಾಡಿ ಪಠ್ಯದಲ್ಲಿ ಅಳವಡಿಸುವಂತೆ ಆದೇಶ ಹೊರಡಿಸಿದೆ. ಆದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು 10 ನೇ ತರಗತಿಯ ಪಠ್ಯದಲ್ಲಿ ಮರು ಸೇರ್ಪಡೆಗೊಳಿಸಿ ಎನ್ನುವ ಬಿಲ್ಲವ ಸಮುದಾಯ ಹಾಗೂ ಗುರುಗಳ ಅನುಯಾಯಿಗಳ ಬೇಡಿಕೆಗೆ ಸರಕಾರ ಇದುವರೆಗೆ ಸ್ಪಂದಿಸಿಲ್ಲ. ಸರಕಾರದಲ್ಲಿ ನಮ್ಮ ಸಮುದಾಯಕ್ಕೆ ಸೇರಿದ ಇಬ್ಬರು ಸಚಿವರು ಇದ್ದರೂ ಈ ಬಗ್ಗೆ ಮಾತನಾಡಿ ಸರಿಪಡಿಸದೇ ಇರುವುದು ನಮಗೆ ನೋವು ತಂದಿದೆ. ನಾರಾಯಣ ಗುರುಗಳ ಕುರಿತ ಪಠ್ಯವನ್ನು 10ನೇ ತರಗತಿಯ ಕನ್ನಡ (ಐಚ್ಚಿಕ) ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಸರಕಾರ ಮತ್ತು ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲ ಮುಖಂಡರು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ಈ ರೀತಿ ಹಿಂಬಡ್ತಿ ನೀಡಿರುವ ಷಡ್ಯಂತ್ರದ ಹಿಂದೆ ಇರುವ ಕಾಣದ ಕೈಗಳನ್ನು ಪ್ರಶ್ನಿಸುವ ಧೈರ್ಯ ಅವರುಗಳಿಗೆ ಯಾಕಿಲ್ಲ? ಕನ್ನಡ ಭಾಷಾ ಪಠ್ಯವನ್ನು ಶೇ 20 ರಷ್ಟು ವಿದ್ಯಾರ್ಥಿಗಳ ಮಾತ್ರ ಓದುತ್ತಾರೆ. ಉಳಿದ ಭಾಷಾ ಮಾದ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಗುರುಗಳ ಕುರಿತು ಮಾಹಿತಿಯನ್ನು ಎಲ್ಲಿ ಪಡೆಯಬೇಕು ಎಂಬುದರ ಬಗ್ಗೆ ಸರಕಾರ ಯಾಕೆ ಚಿಂತನೆ ಮಾಡಿಲ್ಲ ಎಂಬುವುದು ಯಕ್ಷ ಪ್ರಶ್ನೆಯಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ ಕಲ್ಲಾಪು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕುಕ್ಕೇಡಿ ಉಪಸ್ಥಿತರಿದ್ದರು.

error: Content is protected !!