ಇಂದಬೆಟ್ಟು ಬಳಿ ಹಗಲು ನಡೆದಿದ್ದ ಕಳ್ಳತನ ಪ್ರಕರಣ, ಮೂವರು ಆರೋಪಿಗಳ ಬಂಧನ: ಚಿನ್ನಾಭರಣ, ಕಾರು, ಬೈಕ್ ಸೇರಿ ₹ 13 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ವಶಕ್ಕೆ: ಬೆಳ್ತಂಗಡಿ ಪೊಲೀಸರ ದಿಟ್ಟ ಕಾರ್ಯಾಚರಣೆಗೆ ಮೆಚ್ಚುಗೆ, ಎಸ್.ಪಿ.ಯಿಂದ ಬಹುಮಾನ ಘೋಷಣೆ

 

ಬಂಗಾಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಹಾಡು ಹಗಲೇ ಮನೆಯೊಂದರಿಂದ ನಗದು ಸಹಿತ ಚಿನ್ನಾಭರಣವನ್ನು ಕಳವುಗೈದ ಘಟನೆ ತಾಲೂಕಿನ ಇಂದಬೆಟ್ಟು ಬಳಿ ಅ. 31ರಂದು ನಡೆದಿದ್ದು, ಕಳವಾದ ಆಭರಣಗಳೊಂದಿಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಂದಬೆಟ್ಟು ಗ್ರಾಮದ ಬಂಗಾಡಿ ಸಮೀಪದ ದೇರಾಜೆ ಎಂಬಲ್ಲಿಯ ನಿವಾಸಿ ಮಹಮ್ಮದ್ ಎಂಬವರ ಮನೆಯಿಂದ ಈ ಭಾರಿ ಮೊತ್ತದ ಚಿನ್ನಾಭರಣ ಕಳವು ಆಗಿದ್ದು, 5 ಸಾವಿರ ರೂ. ನಗದು ಸಹಿತ ಅಂದಾಜು ಸುಮಾರು 12 ಲಕ್ಷ ರೂಪಾಯಿ ಮೌಲ್ಯದ 40 ಪವನ್ ಚಿನ್ನಾಭರಣ ಕಳವು ನಡೆದಿತ್ತು. ಕಳವು ಸಂದರ್ಭದಲ್ಲಿ ಗೋದ್ರೇಜ್ ನಲ್ಲಿ ಇಟ್ಟಿದ್ದ 13 ಪವನಿನ ಚಿನ್ನದ ನೆಕ್ಲೇಸ್ 1, ಒಂದು ಪವನಿನ ಚಿನ್ನದ ಚೈನ್ 1, ಒಂದು ಪವನಿನ ಚಿನ್ನದ ಸಣ್ಣ ಚೈನ್ 1 , ಒಂದೂವರೆ ಪವನಿನ ಚಿನ್ನದ ಮಕ್ಕಳ ಚೈನ್ 2, ತಲಾ ಒಂದು ಒಂದು ಪವನಿನ ಚಿನ್ನದ ಕಾಯಿನ್ಸ್ 4, ತಲಾ ನಾಲ್ಕು ಪವನಿನ ಚಿನ್ನದ ಬಿಸ್ಕೆಟ್ 4, ಎರಡು ಪವನಿನ ಚಿನ್ನದ ಗಟ್ಟಿ 1, ಅರ್ಧ ಪವನಿನ ಚಿನ್ನದ ಬ್ರಾಸ್ ಲೈಟ್ 1, ಅರ್ಧ ಪವನಿನ ಚಿನ್ನದ ತುಂಡಾದ ಬಳೆ ಹಾಗೂ ಪೆಂಡೆಂಟ್ 1, ಅರ್ಧ ಪವನಿನ ಚಿನ್ನದ ಮಗುವಿನ ಕಿವಿ ಓಲೆ 1 ಜೊತೆ ಮೊದಲಾದ ಸುಮಾರು 12,05,200 ರೂಪಾಯಿ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು ನಗದು ಹಣ 5200 ರೂಪಾಯಿ ಕಳವಾಗಿತ್ತು.
ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಆರೋಪಿಗಳಾದ ನಾವೂರು ನಿರಿಂದಿ ಮನೆಯ ಮಹಮ್ಮದ್ ಸ್ವಾಲಿ(26), ಲಾಯಿಲಾ ಕುಂಟಿನಿ ನಿವಾಸಿ ಯಾಹ್ಯಾ(32), ನಾವೂರು‌‌ ಕೀರ್ನಡ್ಕ‌ ನಿವಾಸಿ ಬಿ.ಹೆಚ್. ನೌಫಲ್(27) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.‌ ಆರೋಪಿಗಳಿಂದ ಕಳವಾದ 12,05,200 ರೂ. ಮೌಲ್ಯದ 320 ಗ್ರಾಂ ಚಿನ್ನಾಭರಣ,1,230 ರೂ. ನಗದು, ಕಳ್ಳತ‌ಕ್ಕೆ ಬಳಸಿದ ಕಾರು, ಬೈಕ್ ಹಾಗೂ ನಾಲ್ಕು ಮೊಬೈಲ್ ಸೇರಿದಂತೆ ಒಟ್ಟು 13,75,930 ರೂ.‌ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

 

 

 

ಆರೋಪಿಗಳ ಪತ್ತೆಗಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಗುಣಾರೆ ಅವರ ನಿರ್ದೇಶನದಂತೆ ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ್ ಅವರ ಸೂಚನೆಯಂತೆ, ಈ ಪ್ರಕರಣದ ತನಿಖಾಧಿಕಾರಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ ಬಿ., ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ನಂದ ಕುಮಾರ್, ಪ್ರೊ.ಪಿ.ಎಸ್‌.ಐ. ಮೂರ್ತಿ, ಎಎಸೈ , ದೇವಪ್ಪ ಎಂ.ಕೆ., ಸಿಬ್ಬಂದಿ ಲಾರೆನ್ಸ್ ರಾಜೇಶ್ ಎನ್., ವೃಷಭ, ಪ್ರಮೋದ್ ನಾಯ್ಕ್, ಇಬ್ರಾಹಿಂ ಗರ್ಡಾಡಿ, ಲತೀಫ್, ವಿಜಯ ಕುಮಾರ್ ರೈ, ವೆಂಕಟೇಶ್, ಬಸವರಾಜ್, ಚರಣ್, ಅವಿನಾಶ್, ವಾಹನ ಚಾಲಕರಾದ ಮಹಮ್ಮದ್ ಆಸೀಫ್, ಸತೀಶ್, ತಾಂತ್ರಿಕ ಸಿಬ್ಬಂದಿ ದಿವಾಕರ, ಸಂಪತ್ ಕುಮಾರ್‌ಅವರ ಸಹಾಯದಿಂದ ಆರೋಪಿಗಳನ್ನು ಪತ್ತೆ ಮಾಡಲಾಗಿದೆ.

ಬಹುಮಾನ ಘೋಷಣೆ:

ಕಳ್ಳತನ ಪ್ರಕರಣ ಭೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನವಣೆ ಋಷಿಕೇಶ್ ಭಗವಾನ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಕಾರ್ಯಚರಣೆಯಲ್ಲಿ ಭಾಗವಹಿಸಿದ ತಂಡದ ಎಲ್ಲರಿಗೂ ನಗದು ಬಹುಮಾನ ಘೋಷಿಸಿದ್ದಾರೆ.

error: Content is protected !!