ಮಂಗಳೂರು: ಬೇಕೆಂದಾಗ ಯಾರು ಬೇಕಾದರೂ ಮರಳು ಒಯ್ಯುವ ಕೆಲಸಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಸಮರ್ಪಕ ಮರಳು ಸಾಗಾಟ ನಡೆಸಲು ದ.ಕ. ವ್ಯವಸ್ಥಿತ ಯೋಜನೆ ರೂಪಿಸಿಕೊಂಡಿದೆ.
ಮರಳುಗಾರಿಗೆ ತಾಲೂಕುಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳಿಗೆ ಅನುಮತಿ ನೀಡಿದ್ದು, ಆಧುನಿಕ ತಂತ್ರಾಂಶ ಬಳಸಿ ಆನ್ ಲೈನ್ ಮೂಲಕ ಸಂಪೂರ್ಣ ನಿಯಂತ್ರಣ ಪ್ರಕ್ರಿಯೆ ನಡೆಯಲಿದ್ದು, ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಸಾಗಾಟ ಪ್ರಕ್ರಿಯೆಗೆ ವೆಬ್ ಆ್ಯಪ್:
ಮರಳು ಸಾಗಿಸುವ ವಾಹನ ಯಾರ್ಡ್ ಗೆ ಆಗಮಿಸಿ ಕಿಯೋನಿಕ್ಸ್ ನ ಆನ್ಲೈನ್ ವೆಬ್ ಆ್ಯಪ್ ನಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು. ಮರಳು ಸಾಗಾಟ ವಾಹನಕ್ಕೂ ಜಿಪಿಎಸ್ ಅಳವಡಿಸಲಾಗುತ್ತದೆ. ವಾಹನಗಳ ಮಾಹಿತಿ ಹಾಗೂ ಸಾಗಿಸುವ ಯುನಿಟ್ ವಿವರ ದಾಖಲಿಸಿದ ಬಳಿಕವಷ್ಟೇ ವಾಹನ ಮುಂದೆ ಸಾಗಲು ತಯಾರಾಗಿರುತ್ತದೆ. ಅದೇ ರೀತಿ ಮರಳು ಶೇಖರಣೆ ಮಾಡಿರುವ ಯಾರ್ಡ್ ನಲ್ಲಿ ಎಷ್ಟು ಪ್ರಮಾಣದ ಮರಳು ಇದೆ, ಎಷ್ಟು ಯುನಿಟ್ ಮರಳು ಸಾಗಿಸಬಹುದು ಎಂಬುದನ್ನು ಮೊದಲೇ ಅಂದಾಜಿಸಿರಲಾಗುತ್ತದೆ. ಅದೇ ರೀತಿ ಯಾರ್ಡ್ ನಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಮರಳು ಪೂರೈಕೆಯನ್ನು ಜಿಲ್ಲಾ ಕೇಂದ್ರದಲ್ಲಿ ಲೈವ್ ವೀಕ್ಷಣೆ ಮೂಲಕ 24*7 ಅಂದರೆ ನಿರಂತರ ನಿಯಂತ್ರಣ ನಡೆಸಲಾಗುತ್ತದೆ.
ಮಂಗಳೂರು ಸ್ಮಾರ್ಟ್ ಸಿಟಿ ಕೇಂದ್ರದಲ್ಲಿ ಕಂಟ್ರೋಲ್:
ದ.ಕ. ಜಿಲ್ಲೆಯಲ್ಲಿ ಮರಳು ವಿಲೇವಾರಿ ಹಾಗೂ ಸಾಗಾಟದ ಮಾನಿಟರಿಂಗ್ ಗಾಗಿ ಕೊಯೋನಿಕ್ಸ್ ಸಂಸ್ಥೆಯ ಮರಳು ಪರಿವೀಕ್ಷಕ ವ್ಯವಸ್ಥೆಯಲ್ಲಿ ಜಿಲ್ಲೆಯ NON CRZ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮರಳು ಯಾರ್ಡ್ ಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗುತ್ತದೆ. ಇದು ಜಿಲ್ಲಾ ಕೇಂದ್ರದ ನಿಯಂತ್ರಣದಲ್ಲಿ ಇರಲಿದೆ. ಜಿಲ್ಲೆಯ CRZ ಪ್ರದೇಶದಲ್ಲಿ ಈಗಾಗಲೇ ಕಾರ್ಯಗತಗೊಂಡಿರುವ ಕಿಯೋನಿಕ್ಸ್ ಮರಳು ಪರಿವೀಕ್ಷಕ ಸಿಂಗಲ್ ವಿಂಡೋ ಮಾನಿಟರಿಂಗ್ ವ್ಯವಸ್ಥೆಯಲ್ಲಿ ಮರಳು ಯಾರ್ಡ್ ಗಳಲ್ಲಿನ ಸಿಸಿ ಕ್ಯಾಮರಾ ಹಾಗು ವಾಹನಗಳ ಜಿ.ಪಿ.ಎಸ್. ಮೂಲಕ ಚಲನವಲನಗಳನ್ನು ಮಾನಿಟರಿಂಗ್ ಮಾಡಲಾಗುತ್ತಿದೆ. ಈ ಕಾರ್ಯಗಳು ಮಂಗಳೂರು ಸ್ಮಾರ್ಟ್ ಸಿಟಿ ಕಂಟ್ರೋಲ್ ರೂಂನಲ್ಲಿ ನಡೆಯುತ್ತಿದೆ.
ಅಕ್ರಮ ಮರಳು ಸಾಗಣೆಗೆ ಬ್ರೇಕ್:
ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ನೂರಾರು ವಾಹನಗಳು ಎಗ್ಗಿಲ್ಲದೇ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಎಚ್ಚೆತ್ತುಕೊಂಡಿರುವ ಇಲಾಖೆ, ಮಾನಿಟರಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಂತೆ ಮರಳು ಗುತ್ತಿಗೆದಾರರು ಯಾರ್ಡ್ ಗಳಲ್ಲಿ ವಾಹನಕ್ಕೆ ಮರಳು ತುಂಬಿಸುವ ಮೊದಲು ಕಿಯೋನಿಕ್ಸ್ ಆನ್ಲೈನ್ ವೆಬ್ ಆಪ್ http://karsand.in/vehicleList.php ನಲ್ಲಿ ವಾಹನದ ಜಿ.ಪಿ.ಎಸ್. ಚಾಲ್ತಿಯಲ್ಲಿರುವುದನ್ನು ಖಾತ್ರಿಪಡಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಜಿ.ಪಿ.ಎಸ್. ಅಳವಡಿಸದ ಹಾಗೂ ಜಿ.ಪಿ.ಎಸ್. ಸಮರ್ಪಕವಾಗಿ ಕೆಲಸ ನಿರ್ವಹಿಸದ ವಾಹನಗಳಿಗೆ ಮರಳು ಯಾರ್ಡ್ ನಲ್ಲಿ ಮರಳು ತುಂಬಿಸಲು ಅವಕಾಶ ಇಲ್ಲ ಎಂಬ ಸೂಚನೆಯಿದೆ. ಮಾನಿಟರಿಂಗ್ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದ್ದು, ಕಾನೂನು ಉಲ್ಲಂಘಿಸಿದ 15ಕ್ಕೂ ಹೆಚ್ಚು ವಾಹನಗಳ ಮೇಲೆ ಮೊಕದ್ದಮೆ ಹೂಡುವ ಕಾರ್ಯ ಇಲಾಖೆಯಿಂದ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಆ್ಯಪ್ ಗೆ ಜಿ.ಪಿ.ಎಸ್. ಸಂಯೋಜನೆ ಕಡ್ಡಾಯ:
ಮರಳು ವಾಹನ ಮಾಲೀಕರು ತಮ್ಮ ವಾಹನದಲ್ಲಿ ಜಿ.ಪಿ.ಎಸ್. ಉಪಕರಣ ಈಗಾಗಲೇ ಹೊಂದಿದ್ದರೆ ಅದನ್ನು ಉಪಕರಣವನ್ನು ಕಿಯೋನಿಕ್ಸ್ ಮರಳುಪರಿವೀಕ್ಷಕ ಸಾಫ್ಟ್ ವೇರ್ ಗೆ ಸಂಯೋಜಿಸಿ GPS FITTMENT ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಲಭ್ಯವಿದೆ. ವಾಹನದಲ್ಲಿ ಇರುವ ಜಿ.ಪಿ.ಎಸ್. ಕಾರ್ಯ ನಿರ್ವಹಿಸದಿದ್ದಲ್ಲಿ, ಈ ವ್ಯವಸ್ಥೆಯ ತಂತ್ರಾಂಶಕ್ಕೆ ಸರಿ ಹೊಂದುವ ಹೊಸ GPS ಉಪಕರಣ ಅಳವಡಿಸುವುದು ಕಡ್ಡಾಯವಾಗಿದೆ.
ಸಹಾಯ ವಾಣಿ ಮೂಲಕ ಮಾರ್ಗದರ್ಶನ:
ಮರಳು ಪರಿವೀಕ್ಷಕ ವೆಬ್ ಆ್ಯಪ್ ಉಪಯೋಗಿಸುವ ಸಂದರ್ಭ ಸಹಾಯ ಬೇಕಾದಲ್ಲಿ ಹಾಗೂ ಮರಳು ಯಾರ್ಡ್ ಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿ ಆನ್ಲೈನ್ ಮಾನಿಟರಿಂಗ್ ಸಾಫ್ಟ್ ವೇರ್ ಸಂಯೋಜಿಸುವ ಬಗ್ಗೆ ಮರಳುಪರಿವೀಕ್ಷಕ ಸಹಾಯವಾಣಿ ಸಂಖ್ಯೆ 9901866930 ಸಂಪರ್ಕಿಸಬಹುದು.
ಜಿಲ್ಲೆಯ non crz ವ್ಯಾಪ್ತಿಯಲ್ಲಿ 15 ಮಂದಿಗೆ ಅನುಮತಿ
ಜಿಲ್ಲೆಯಲ್ಲಿ ಕೆಲವೇ ಮಂದಿಗೆ ಮರಳು ತೆಗೆಯಲು ಅನುಮತಿ ನೀಡಲಾಗಿದ್ದು ಬೆಳ್ತಂಗಡಿ ಹಾಗೂ ಕಡಬ ತಾಲೂಕಿನ ತಲಾ ಐದು ಮಂದಿಗೆ ಮರಳು ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಇನ್ನು ಪುತ್ತೂರು ತಾಲೂಕಿನ ಮೂರು ಹಾಗೂ ಸುಳ್ಯ ತಾಲೂಕಿನ ಇಬ್ಬರು ಸೇರಿ ಒಟ್ಟು 15 ಮಂದಿಗೆ ಅನುಮತಿ ನೀಡಲಾಗಿದೆ.
isearchಗೆ ನಿರ್ವಹಣೆ ಹೊಣೆ:
ಮರಳು ಮಾನಿಟರಿಂಗ್ ವ್ಯವಸ್ಥೆಯನ್ನು isearch ತಂತ್ರಾಂಶ ಅಭಿವೃದ್ಧಿ ಹಾಗೂ ನಿರ್ವಹಣಾ ಸಂಸ್ಥೆಗೆ ನೀಡುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ.
ಮರಳು ಮಾನಿಟರಿಂಗ್ ವ್ಯವಸ್ಥೆಯ ಆ್ಯಪ್ ನಿರ್ವಹಣಾ ಕಾರ್ಯವನ್ನು isearch ತಂತ್ರಾಂಶ ಅಭಿವೃದ್ಧಿ ಹಾಗೂ ನಿರ್ವಹಣಾ ಸಂಸ್ಥೆ ನೋಡಿಕೊಳ್ಳುತ್ತಿದೆ.
ಮರಳು ಸಾಗಾಟ ಲಾರಿಗಳಲ್ಲಿ GPS ಅಳವಡಿಸಿ ಮಾನಿಟರಿಂಗ್ ಮಾಡುವ ಬಗ್ಗೆ ಈಗಾಗಲೇ ಪುತ್ತೂರು ಉಪ ವಿಭಾಗ ಸಹಾಯಕ ಆಯುಕ್ತರು ಆದೇಶ ನೀಡಿದ್ದು ಸಮರ್ಪಕ ಕಾರ್ಯನಿರ್ವಹಣೆ ನಡೆಯುವ ಸಲುವಾಗಿ ತಾಲೂಕುಗಳ ತಹಸೀಲ್ದಾರ್ ಅವರಿಗೆ ಮಾಹಿತಿ ರವಾನಿಸಲಾಗಿದೆ.