
ಬೆಂಗಳೂರು: ರಾಜ್ಯದ ಎಲ್ಲಾ ಪಂಚಾಯಿತಿಗಳ ಚುನಾವಣೆಯನ್ನು ಈ ವರ್ಷಾಂತ್ಯದೊಳಗೆ ನಡೆಸಲು ಕ್ರಮವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 8 ವಾರಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆ ಕಾರ್ಯ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ನಂತರ ರಾಜ್ಯ ಚುನಾವಣೆ ಆಯೋಗ ಚುನಾವಣೆ ಪ್ರಕ್ರಿಯೆ ನಡೆಸಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 25,540 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ ಖಾಲಿ ಇರುವ 8,770 ಹುದ್ದೆ ಪೈಕಿ 4 ಸಾವಿರ ಹುದ್ದೆಯ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಎ ವರ್ಗದ 268, ಬಿ ವರ್ಗದ 1,079, ಸಿ ವರ್ಗದ 5,294, ಡಿ ವರ್ಗದ 2,129 ಹುದ್ದೆಗಳು ಖಾಲಿ ಇದ್ದು, ಈ ಪೈಕಿ ಎಲ್ಲ ವರ್ಗದ ಹುದ್ದೆಗಳ ಪೈಕಿ 4 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಖಂಡ್ರೆ ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಎಲ್ಲ ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡಲು ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೂ ಕ್ರಮ ವಹಿಸುವಂತೆ ಸೂಚನೆ ನೀಡಿರುವುದಾಗಿ ಈಶ್ವರ್ ಖಂಡ್ರೆ ತಿಳಿಸಿದರು.
ಈಗಾಗಲೇ ಜೂನ್ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ಸಮ್ಮತಿ ಸೂಚಿಸಿದ್ದು, 1,400 ಹುದ್ದೆಗಳ ಭರ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅನುಮತಿ ನೀಡಲಾಗಿದೆ. ಈ ಹುದ್ದೆಗಳ ಭರ್ತಿಗೆ ಶೀಘ್ರವೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಗ್ರಾಮೀಣ ಕರ್ನಾಟಕದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಎಲ್ಲ ಪಂಚಾಯ್ತಿಗಳ ಆದ್ಯ ಕರ್ತವ್ಯವಾಗಿದ್ದು, ಯಾವುದೇ ಕಾರಣಕ್ಕೂ ಕಲುಷಿತ ನೀರು ಸರಬರಾಜಾಗದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಮುಗ್ಧ ಜನರು ಮೃತಪಟ್ಟ ಘಟನೆಗಳು ಹಲವೆಡೆ ನಡೆದಿವೆ. ಇಂತಹ ಘಟನೆ ಮರುಕಳಿಸದಂತೆ ನೀರಿನ ಪರೀಕ್ಷೆಯನ್ನು ಎನ್.ಎ.ಬಿ.ಎಲ್. ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ನಿಯಮಿತವಾಗಿ ಮಾಡುವಂತೆ ಆದೇಶಿಸಲಾಗಿದೆ. ಎಲ್ಲ ನಾಗರಿಕತೆಗಳೂ ಹುಟ್ಟಿದ್ದು ನದಿಗಳ ತಟದಲ್ಲಿ. ನೀರು ಜೀವಜಲ. ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಹೀಗಾಗಿ ಪಂಚಾಯ್ತಿಗಳಿಂದ ಪೂರೈಕೆ ಮಾಡುವ ಕುಡಿಯುವ ನೀರಿನಲ್ಲಿ ಯಾವುದೇ ಲೋಪ ಆಗದಂತೆ ಬಹು ಹಂತದ ಪರಿಶೀಲನೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದರು.
ಮೇಲ್ಮೈ ನೀರಿನಿಂದ ಮುಂದಿನ 30 ವರ್ಷಗಳ ಕಾಲ ನೀರು ಪೂರೈಸಲು ಕ್ರಮ ವಹಿಸಲಾಗಿದೆ. ಹೀಗಾಗಿ ನದಿ, ಕೆರೆ, ಸರೋವರ ಸೇರಿದಂತೆ ಯಾವುದೇ ಜಲಮೂಲ ಕಲುಷಿತವಾಗದಂತೆ ಸೂಚಿಸಲಾಗಿದೆ. ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆ ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದ ಅವರು, ಜಲ ಮೂಲಗಳಿಗೆ ನೇರವಾಗಿ ಮಲತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇ-ಸ್ವತ್ತು ಸರ್ವರ್ ಸಮಸ್ಯೆ ಪರಿಹರಿಸಲು ಸೂಚನೆ: ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದವರಿಗೆ ಖಾತಾ ವಿಳಂಬವಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಸರ್ವರ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಇನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಸೃಜಿಸಲಾಗಿರುವ ಎಲ್ಲ ಆಸ್ತಿಗಳ ದಾಖಲೀಕರಣ ಆಗಬೇಕು. ಈ ಎಲ್ಲ ಆಸ್ತಿಗಳೂ ಗುಣಮಟ್ಟದಿಂದ ಕೂಡಿರಬೇಕು, ಇದರಲ್ಲಿ ಯಾವುದೇ ರಾಜೀಗೆ ಅವಕಾಶವಿಲ್ಲ. ಜೊತೆಗೆ ಎಲ್ಲ ಅಸ್ತಿಯನ್ನು ಜಿಯೋ ಟ್ಯಾಗ್ ಮಾಡಿ ಸರ್ಕಾರಿ ಆಸ್ತಿ ಸಂರಕ್ಷಣೆ ಮಾಡಿ, ಅದನ್ನು ಅಪ್ ಲೋಡ್ ಮಾಡುವಂತೆ ತಿಳಿಸಿದರು.
ಮನ್ರೇಗಾ ಸಂಯೋಜನೆಯಲ್ಲಿ ಸಾಮಾಜಿಕ ಅರಣ್ಯಕ್ಕೆ ಆರ್ಥಿಕ ನೆರವು ಒದಗಿಸಲಾಗಿದ್ದು, ರಸ್ತೆ ಬದಿಯಲ್ಲಿ ಮತ್ತು ನೆಡುತೋಪುಗಳಲ್ಲಿ ಬೆಳೆಸಲಾಗಿರುವ ಸಸಿಗಳ ಜಿಯೋ ಟ್ಯಾಗ್ ಮಾಡಿ, ಆಡಿಟ್ ಮಾಡಿಸಲು ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.
ರಾಜ್ಯದಲ್ಲಿ 2 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆ ಇದ್ದು, ಇದರಲ್ಲಿ ಎಷ್ಟು ಮಣ್ಣಿನ ರಸ್ತೆ ಇದೆ. ಎಷ್ಟು ಕಾಂಕ್ರೀಟ್ ರಸ್ತೆ ಇದೆ, ಎಷ್ಟು ಡಾಂಬರು ರಸ್ತೆ ಇದೆ ಎಂಬ ಸಂಪೂರ್ಣ ವಿವರ ನೀಡುವಂತೆ ತಿಳಿಸಿದ ಸಚಿವರು, ಬಸ್ ಸಂಪರ್ಕವೇ ಇಲ್ಲದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕನಿಷ್ಠ ಒಂದು ಸಂಪರ್ಕ ರಸ್ತೆ ಕಲ್ಪಿಸಲು ಕ್ರಮ ವಹಿಸುವಂತೆ ತಿಳಿಸಿದರು.