
ಬೆಳ್ತಂಗಡಿ: ಹೋಲಿ ರೆಡೀಮರ್ ಚರ್ಚ್ ಬೆಳ್ತಂಗಡಿ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ವಿಪತ್ತು ವಿಭಾಗ, ಪತ್ರಕರ್ತರ ಸಂಘ ಬೆಳ್ತಂಗಡಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಳ್ಳಿಯಿಂದ ನಗರದವರೆಗೆ ನಮ್ಮ ಸ್ವಚ್ಛತೆ ನಮ್ಮ ಜವಾಬ್ದಾರಿ ಪರಿಕಲ್ಪನೆಯಲ್ಲಿ ಬೃಹತ್ ಸ್ವಚ್ಛತಾ ಆಂದೋಲನವು ಎ 12 ರಂದು ಸವಣಾಲುವಿನಿಂದ ಚರ್ಚ್ ರಸ್ತೆವರೆಗೆ ನಡೆಯಿತು. ಮಂಜದಬೆಟ್ಟು ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹೋಲಿ ರೆಡೀಮರ್ ಚರ್ಚ್ ನ ಧರ್ಮಗುರುಗಳಾದ ರೆ.ಫಾ. ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೊ ಮಾತನಾಡಿದ ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯವಂತರಾಗಿ ಬದುಕಲು ಸಾಧ್ಯ ಸ್ವಚ್ಛತೆಯಿಂದ ಪರಿಸರ ರಕ್ಷಣೆ ಸಾಧ್ಯ ಅದ್ಧರಿಂದ ಪ್ರಜ್ಞಾವಂತ ನಾಗರೀಕರಾದ ನಾವೆಲ್ಲರೂ ನಮ್ಮ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪಣತೊಡಬೇಕು ಎಂದರು.
ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ ಸಮಾಜದ ಜವಾಬ್ದಾರಿಯುತ ನಾಗರಿಕರಾದ ನಾವು ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ಪರಿಸರವನ್ಬು ಹಾಳುಗೆಡಹುವುತ್ತಿರುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ.ಸ್ವಚ್ಛ ಪರಿಸರವನ್ನು ಉಳಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ
ಇಂತಹ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛ ಪರಿಸರ,ಸ್ವಾಸ್ಥ್ಯ ಸಮಾಜದ ನಿರ್ಮಾಣ ಎಂಬ ಜಾಗೃತಿಯನ್ನು ಜನರಲ್ಲಿ ಮೂಡಿಸುತ್ತಿರುವ ಹೋಲಿ ರೆಡೀಮರ್ ಚರ್ಚ್ ನ ಕಾರ್ಯ ಶ್ಲಾಘನೀಯ ಈ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದೆ ಎಂದರು.
ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ತ್ಯಾಜ್ಯ, ಕಸ ಬಿಸಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ ಅಂತವರ ಮೇಲೆ ದಂಡನೆ ಹಾಗೂ ಕೇಸ್ ದಾಖಲಾಗುತ್ತದೆ. ಅದ್ದರಿಂದ ಕಸವನ್ನು ಎಲ್ಲರೂ ನಿರ್ಧಿಷ್ಟ ಸ್ಥಳದಲ್ಲಿ ವಿಲೇವಾರಿ ಮಾಡಬೇಕು ಅಥವಾ ಪಂಚಾಯತ್ ವಾಹನಕ್ಕೆ ನೀಡಬೇಕು, ಯಾರಾದರೂ ಕಸ ಬಿಸಾಕುವವರು ಕಂಡು ಬಂದರೆ ಪಂಚಾಯತ್ ಗಮನಕ್ಕೆ ತರಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಯಶೋಧರ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೀಜನೆ ರಾಜ್ಯಾದ್ಯಂತ ಹಲವಾರು ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸಮಾಜಕ್ಕೊಂದು ಸಂದೇಶ ನೀಡುವ ಕೆಲಸ ಮಾಡಿದ್ದಾರೆ ಎಂದರು. ಈ ವೇಳೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ಸಂಯೋಜಕ ಥೋಮಸ್ ಪಿಂಟೊ, ಲಾಯಿಲ ಗ್ರಾ.ಪಂ ಮಾಜಿ ಅಧ್ಯಕ್ಷೆ ಆಶಾ ಸಲ್ಡಾನ, ಮೇಲಂತಬೆಟ್ಟು ಮಾಜಿ ಸದಸ್ಯ ಚಂದ್ರರಾಜ್ ನೂಜೆಲು, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ವಿನ್ಸೆಂಟ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.ಸ್ವಚ್ಚತಾ ಕಾರ್ಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡ, ಸ್ಥಳೀಯರು ಭಾಗವಹಿಸಿದರು. ಮೇಲಂತ ಬೆಟ್ಟು ಗ್ರಾಮ ಪಂಚಾಯತ್ ಸಂಪೂರ್ಣ ಸಹಕಾರ ನೀಡಿತು.