
ಬೆಳ್ತಂಗಡಿ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ ತನ್ನ ಸಂಘದ ಸದಸ್ಯರುಗಳ ಸಹಕಾರದಿಂದ ಅಭೂತಪೂರ್ವ ಸಾಧನೆಯೊಂದಿಗೆ ₹ 1848 ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸಿ ಶೇ.98 ಸಾಲ ವಸೂಲಾತಿ ಮಾಡಿದ್ದು, ರೂ.5 ಕೋಟಿ ಲಾಭವನ್ನು ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಅಜಿತ್ ಜಿ ಶೆಟ್ಟಿ, ಕೊರ್ಯಾರು ತಿಳಿಸಿದರು. ಅವರು ಎ11 ರಂದು ಗುರುವಾಯನಕೆರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಸಂಘದ 2025-26 ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಸಂಘದಲ್ಲಿ ಒಟ್ಟು 36804 ಸದಸ್ಯರಿದ್ದು ಒಟ್ಟು 4.23 ಕೋಟಿರೂ ಗಳಷ್ಟು ಪಾಲು ಬಂಡವಾಳವನ್ನು ಹೊಂದಿರುತ್ತದೆ. ಸಂಘವು 367.04 ಕೋಟಿ ರೂ ಠೇವಣಿಯನ್ನು ಹೊಂದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 120 ಕೋಟಿ ರೂ. (ಶೇ. 48.11) ಹೆಚ್ಚಳವಾಗಿದೆ. ರೂ.287.94 ಕೋಟಿ ರೂ.ಗಳಷ್ಟು ಹೊರಬಾಕಿ ಸಾಲ ಇದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 71 ಕೋಟಿ ರೂ. (ಶೇ. 33.28) ಹೆಚ್ಚಳವಾಗಿದೆ.ಸಂಘವು 1848 ಕೋಟಿ ರೂ ಒಟ್ಟು ವಾರ್ಷಿಕ ವ್ಯವಹಾರವನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 744 ಕೋಟಿರೂ. (ಶೇ. 67.23) ಪ್ರಗತಿ ಹೊಂದಿದೆ. ಹಾಗೂ ರೂ.5.00 ಕೋಟಿ ರೂ ನಿವ್ವಳ ಲಾಭ ಗಳಿಸಿದ್ದು ಕಳೆದ ವರ್ಷಕ್ಕೆಹೋಲಿಸಿದರೆ ರೂ.2.00 ಕೋಟಿಗೂ ಮಿಕ್ಕಿ ಹೆಚ್ಚಳವಾಗಿದೆ. ಸಂಘವು 5.42 ಕೋಟಿ ರೂ.ಗಳಷ್ಟು ಕ್ಷೇಮ ನಿಧಿ ಮತ್ತು10.17 ಕೋಟಿ ರೂ.ಗಳಷ್ಟು ಇತರ ನಿಧಿಗಳನ್ನು ಹೊಂದಿ, ರೂ. 387 ಕೋಟಿಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. ಸಂಘವು ಸ್ಥಾಪನೆಗೊಂಡ ವರ್ಷದಿಂದ ತನ್ನ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡಿಕೊಂಡು ಬರುತ್ತಿದ್ದು,“ ”ಆಡಿಟ್ ವರ್ಗದಲ್ಲಿ ನಿರಂತರವಾಗಿ ಎ ಶ್ರೇಣಿಯನ್ನು ಕಾಯ್ದುಕೊಂಡು ಬರುತ್ತಿದೆ. ಸೊಸೈಟಿಯು ಕಳೆದ 21 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿರುವ 21 ಶಾಖೆಗಳ ಮೂಲಕ ನೀಡಿಕೊಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಕಾಪು ಮತ್ತು ಅತ್ತಾವರದಲ್ಲಿ ಹೊಸ ಶಾಖೆಯನ್ನು ತೆರೆಯುವ ಬಗ್ಗೆ ಈಗಾಗಲೇ ಕಾರ್ಯ ಪ್ರವೃತರಾಗಿದ್ದೇವೆ.ಸಂಘದ ಕೇಂದ್ರ ಕಛೇರಿ ಗುರುವಾಯನಕೆರೆ, ಮತ್ತು ಬ್ರಹ್ಮಾವರ, ಸುರತ್ಕಲ್ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಳ್ತಂಗಡಿಯಲ್ಲಿ11.50 ಸೆಂಟ್ಸ್ ನಿವೇಶನವನ್ನು ಸಂಘದ ಹೆಸರಿನಲ್ಲಿ ಈಗಾಗಲೇ ಖರೀದಿಸಿದ್ದು, 2030ಕ್ಕೆ ಸಂಘದ ಬೆಳ್ಳಿಹಬ್ಬದ ಸಂದರ್ಭ ಬೆಳ್ತಂಗಡಿಯಲ್ಲಿ ಸಂಘದ ಕೆಂದ್ರ ಕಚೇರಿಗೆ ನೂತನ ಸುಸಜ್ಜಿತ ಕಟ್ಟಡವನ್ನು ಹೊಂದುವ ಯೋಜನೆಯನ್ನು ರೂಪಿಸಲಾಗಿದೆ.ಹಾಗೂ ಪುತ್ತೂರು, ಉರ್ವಮಾರ್ಕೆಟ್ ಮತ್ತು ಉಪ್ಪಿನಂಗಡಿ ಶಾಖೆಗಳನ್ನು ಈ ಆರ್ಥಿಕ ವರ್ಷದಲ್ಲಿ ನವೀಕೃತಗೊಳಿಸುವ ಬಗ್ಗೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಘದಲ್ಲಿ ಪ್ರಸ್ತುತ 92 ಸಿಬ್ಬಂದಿಗಳು ಮತ್ತು 55 ನಿತ್ಯ ನಿಧಿ ಸಂಗ್ರಾಹಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಘದ ಪ್ರಗತಿ ಮತ್ತು ಸೇವೆಯನ್ನು ಪರಿಗಣಿಸಿ 2024-25ನೇ ಸಾಲಿನ 74ನೇ ಅಖಿಲಭಾರತ ಸಹಕಾರಿ ಸಪ್ತಾಹದಲ್ಲಿ ದ.ಕ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಯನ್ನು ಗಳಿಸಿರುತ್ತದೆ.“ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ 5 ಬಾರಿ ಸಾಧನ ”ಪ್ರಶಸ್ತಿ ಪಡೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿರುತ್ತದೆ. ಸಂಘವು ಈ ಆರ್ಥಿಕ ವರ್ಷದಲ್ಲಿ ಹಲವಾರು ಸಂಘ ಸಂಸ್ಥೆಗಳ ಸಾಮಾಜಿಕ ಹಾಗೂ ಜನೋಪಯೋಗಿ ಕಾರ್ಯಗಳಿಗೆ ರೂ.5,00,000/-ಕ್ಕೂಮಿಕ್ಕಿ ದೇಣಿಗೆ ನೀಡಿರುತ್ತದೆ. ಗ್ರಾಹಕರಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ನೀಡುವ ಸಲುವಾಗಿ ನೆಫ್ಟ್,ಆರ್.ಟಿ.ಜಿ.ಎಸ್ ಸೌಲಭ್ಯ, ಇ-ಸ್ಟಾಂಪ್ ಹಾಗೂ ಎಸ್.ಎಂ.ಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ, ನಿರ್ದೇಶಕರುಗಳಾದ ಬಾಲಕೃಷ್ಣ ಪೂಂಜ, ಪುಷ್ಪರಾಜ್ ಶೆಟ್ಟಿ, ರಘುರಾಮ ಶೆಟ್ಟಿ ಉಜಿರೆ, ಜಯರಾಮ ಭಂಡಾರಿ ಧರ್ಮಸ್ಥಳ, ಜಯರಾಮ ರೈ ಮುಂಡಾಡಿಗುತ್ತು, ಮಂಜುನಾಥ ರೈ, ಪುರಂದರ ಶೆಟ್ಟಿ ಪಾಡ್ಯಾರ್,ಸೀತಾರಾಮ ರೈ, ಕೃಷ್ಣ ರೈ ,ಸಾರೀಕ ಡಿ ರೈ, ವಿಜಯ ಶೆಟ್ಟಿ, ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ಉಪಸ್ಥಿತರಿದ್ದರು.