“ಮೇಲ್ಜಾತಿಯ” ಬಾಲಕಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ..!: ಗಂಭೀರವಾಗಿ ಗಾಯಗೊಂಡ ಯುವಕ ಸಾವು

ಸಮಾಜದಲ್ಲಿ “ಮೇಲ್ಜಾತಿ”ಯೆಂದು ಕರೆಸಿಕೊಳ್ಳುವ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಪರಿಣಾಮ ಯುವಕ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಠಾಣಾ ಕುಶನೂರ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಬೇಡಕುಂದಾ ಗ್ರಾಮದ ನಿವಾಸಿ ಸುಮಿತ್ (19) ಎಂಬಾತ ರಕ್ಷಾಳ್ ಗ್ರಾಮದ ಬಾಲಕಿಯನ್ನು ಪ್ರೀತಿಸುತಿದ್ದ. ರವಿವಾರದಂದು ನಮ್ಮ ಮನೆ ಕಡೆಗೆ ಬಾ ಎಂದು ಸುಮಿತ್ ನನ್ನು ಹುಡುಗಿ ಕರೆದಿದ್ದಳು. ಹುಡುಗಿಯನ್ನು ಭೇಟಿ ಮಾಡಲು ಹೋದ ಸುಮಿತ್ ನನ್ನು, ಹುಡುಗಿಯ ಅಪ್ಪ, ಅಣ್ಣ ಮತ್ತು ಸಂಬಂಧಿಕರು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಬಳಿಕ ಆತ ಮನೆಯಿಂದ ಹೊರಗಡೆ ಹೋದ ನಂತರ ಬಾಲಕಿಯ ಅಣ್ಣ ಮತ್ತು ಆತನ ಗೆಳೆಯರು ಸೇರಿಕೊಂಡು ಮತ್ತೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಸುಮಿತ್ ನ ಮನೆಗೆ ಕರೆ ಮಾಡಿ ಆತನನ್ನು ಕರೆದೊಯ್ಯಲು ಹೇಳಿದ್ದಾರೆ ಎಂದು ಮೃತ ಯುವಕನ ಸಂಬಂಧಿಕರು ತಿಳಿಸಿದ್ದಾರೆ.

ಸುಮಿತ್ ನ ತಂದೆ ಹಾಗೂ ಸಹೋದರರು ಘಟನೆ ನಡೆದ ಸ್ಥಳಕ್ಕೆ ಬಂದು, ಸುಮಿತ್ ನನ್ನು ತಕ್ಷಣವೇ ಠಾಣಾ ಕುಶನೂರ್ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಮಹಾರಾಷ್ಟ್ರದ ಉದಗೀರ್ ಲಾತೂರ್ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಮಿತ್ ಮೃತಪಟ್ಟಿದ್ದಾನೆ.

error: Content is protected !!