ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ..?: ನಿರಂತರ ಹೋರಾಟದ ಫಲವಾಗಿ ಅಧಿಕೃತ ಅನುಮೋದನೆ ದೊರಕುವ ನಿರೀಕ್ಷೆ..!: ಹೇಗಿರಲಿದೆ ರೈಲು ಸಂಚಾರದ ವೇಳಾಪಟ್ಟಿ..?

ಮಂಗಳೂರು: ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆಯಾಗಬೇಕು ಎಂಬುದು ಹಲವು ವರ್ಷಗಳ ನಿರಂತರ ಹೋರಾಟ. ಸದ್ಯ ಈ ಹೋರಾಟಕ್ಕೆ ಜಯ ಸಿಗುವ ನಿರೀಕ್ಷೆಯಿದ್ದು ನೈಋತ್ಯ ಮತ್ತು ದಕ್ಷಿಣ ರೈಲ್ವೇ ವಲಯಗಳಿಂದ ಅನುಮೋದನೆ ಸಿಕ್ಕಿ, ಪ್ರಸ್ತಾವನೆಯನ್ನು ಈಗ ಅನುಮತಿಗಾಗಿ ರೈಲ್ವೇ ಮಂಡಳಿಗೆ ಸಲ್ಲಿಸಲಾಗಿದೆ.

ದಶಕಗಳ ಹಿಂದೆ ಮೀಟರ್ ಗೇಜ್ ಕಾಲದಲ್ಲಿ ಸುಬ್ರಹ್ಮಣ್ಯದಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತು ಮಂಗಳೂರುವರೆಗೆ 2005ನೇ ಇಸವಿ ತನಕ 06484/85 ಹಾಗೂ 06486/87 ಪ್ಯಾಸೆಂಜರ್ ರೈಲು ಸಂಚರಿಸುತ್ತಿತ್ತು. ಹಳಿ ಪರಿವರ್ತನೆಯ ನಂತರ ಇದು ಪುತ್ತೂರಿನವರೆಗೆ ಮಾತ್ರ ಸಂಚಾರ ನಡೆಸುತ್ತಿದೆ. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

ಈ ರೈಲು ಸಂಚಾರ ವಿಸ್ತರಣೆಗಾಗಿ ಅನೇಕ ವರ್ಷಗಳಿಂದ ಪ್ರಯಾಣಿಕರು ಮತ್ತು ಸ್ಥಳೀಯ ಮುಖಂಡರು ಹೋರಾಟ ನಡೆಸುತ್ತಿದ್ದರು. ಈ ರೈಲನ್ನು ಸುಬ್ರಹ್ಮಣ್ಯ ವರೆಗೆ ವಿಸ್ತರಣೆ ಮಾಡಬೇಕು ಎಂದು ಕೋರಿ ದಕ್ಷಿಣ ರೈಲ್ವೇಯ ಮಂಗಳೂರು ರೈಲ್ವೆ ಬಳಕೆದಾರ ಸಲಹಾ ಸಮಿತಿಯ ಸದಸ್ಯ ಹನುಮಂತ ಕಾಮತ್ ಅವರು ಪಾಲಕ್ಕಾಡ್‌ನಲ್ಲಿ ನಡೆದ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಎರಡು- ಮೂರು ವರ್ಷಗಳಿಂದ ನಿರಂತರವಾಗಿ ಪ್ರಸ್ತಾವನೆ ಮಂಡಿಸಿದ್ದರು. ರೈಲ್ವೇ ಸಂಘಟನೆಗಳು ದಕ್ಷಿಣ ಸಂಸದರ ಮುಖಾಂತರ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಿದ್ದವು. ಸಂಸದ ಕ್ಯಾ|ಬ್ರಿಜೇಶ್ ಚೌಟ ಕೂಡ ಕಳೆದ ಜುಲೈಯಲ್ಲಿ ಸಂಸತ್ತಿನ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾವಿಸಿ ವಿಸ್ತರಣೆಗೆ ಆಗ್ರಹಿಸಿದ್ದರು.

ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಕಳೆದ ತಿಂಗಳು ದಕ್ಷಿಣ ರೈಲ್ವೇಯ ಚೆನ್ನೈ ಕಚೇರಿಯ ಅಧಿಕಾರಿಗಳನ್ನು ಭೇಟಿಯಾಗಿ ಈ ಪ್ರಸ್ತಾವನೆಯ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿದ್ದರು.

ಸದ್ಯ ಈ ನಿರಂತರ ಪ್ರಯತ್ನದ ಬಳಿಕ ಈಗ ಎಲ್ಲ ತಾಂತ್ರಿಕ ಅಡೆತಡೆ ನಿವಾರಣೆಯಾಗಿ ರೈಲ್ವೇ ಇಲಾಖೆಯಿಂದ ನ. 18ರಂದು ರೈಲ್ವೇ ಮಂಡಳಿಗೆ ಕಳುಹಿಸಲಾಗಿದ್ದು, ಅಧಿಕೃತ ಅನುಮೋದನೆ ದೊರಕುವ ನಿರೀಕ್ಷೆ ಇದೆ.

ಒಂದು ವೇಳೆ ಈ ಅನುಮೋದನೆ ದೊರೆತರೆ ಸುಬ್ರಹ್ಮಣ್ಯ ಕಡೆಗೆ ಪ್ರಯಾಣಿಸುವ ನೂರಾರು ನಿತ್ಯ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಮುಖ್ಯ ವಾಗಿ ಸುಳ್ಯದ ಗ್ರಾಮೀಣ ಭಾಗಗಳಿಂದ ಮಂಗಳೂರಿನ ಶಾಲಾ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಇದು ಬಹಳಷ್ಟು ಪ್ರಯೋಜನವಾಗಲಿದೆ.

ಹೇಗಿರಲಿದೆ ರೈಲು ಸಂಚಾರದ ವೇಳಾಪಟ್ಟಿ..?

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಈ ರೈಲು ಮಂಗಳೂರು ಸೆಂಟ್ರಲ್‌ನಿAದ ಬೆಳಗ್ಗೆ 4ಕ್ಕೆ ಹೊರಟು ಸುಬ್ರಹ್ಮಣ್ಯಕ್ಕೆ ಬೆಳಗ್ಗೆ 6.30ಕ್ಕೆ ತಲುಪಲಿದೆ.

ಸುಬ್ರಹ್ಮಣ್ಯದಿಂದ ಬೆಳಗ್ಗೆ 7ಕ್ಕೆ ಹೊರಟು 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಮಂಗಳೂರು ಸೆಂಟ್ರಲ್‌ನಿAದ ರಾತ್ರಿ 6ಕ್ಕೆ ಹೊರಟು ರಾತ್ರಿ 8.15ಕ್ಕೆ ಸುಬ್ರಹ್ಮಣ್ಯ ತಲುಪಲಿದೆ.

ಸುಬ್ರಹ್ಮಣ್ಯದಿಂದ ರಾತ್ರಿ 8.40 ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 11.15ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

error: Content is protected !!