ಗರಿಗೆದರಿದ ನವರಾತ್ರಿ ಸಂಭ್ರಮ: ಮೈಸೂರು ದಸರಾ ಉತ್ಸವ ಇಂದು ಉದ್ಘಾಟನೆ; 10 ದಿನವೂ ವೈವಿಧ್ಯಮಯ ಕಾರ್ಯಕ್ರಮ

ಮೈಸೂರು: ನವರಾತ್ರಿ ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ, ದೇವಸ್ಥಾನಗಳು ಹೂವಿನ ಅಲಂಕಾರಗಳಿAದ ಕಂಗೊಳಿಸುತ್ತಿದೆ. ಮೈಸೂರು ದಸರಾ ಉತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು 10 ದಿನವೂ ವಿವಿಧ ಕಾರ್ಯಕ್ರಮಗಳ ನಡೆಯಲಿದೆ.

ಇಂದು ಬೆಳಗ್ಗೆ 11:30ಕ್ಕೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿನ ಘಟಿಕೋತ್ಸವ ಭವನದಲ್ಲಿ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 11:30 ಗಂಟೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಆಹಾರ ಮೇಳ ಕಾರ್ಯಕ್ರಮವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಾಹರಗಳ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 12:30ಕ್ಕೆ ನಗರದ ಕುಪ್ಪಣ್ಣ ಪಾರ್ಕ್ (ನಿಶಾದ್ ಬಾಗ್) ಫಲಪುಷ್ಪ ಪ್ರದರ್ಶನಕ್ಕೆ, ಸಂಜೆ 04 ಗಂಟೆಗೆ ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅವರಣದಲ್ಲಿನ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ “ದಸರಾ ಕುಸ್ತಿ ಪಂದ್ಯಾವಳಿ”ಗೆ, ಸಂಜೆ 4:30 ಗಂಟೆಗೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಸಿದ್ಧಾರ್ಥ ನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ “ರಾಜ್ಯಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರ”ದಲ್ಲಿ ರಚಿಸಲಾದ ಕಲಾ ಕೃತಿಗಳ ಪ್ರದರ್ಶನ, ಲಲಿತ ಕಲೆ, ಕರಕುಶಲ ಕಲೆಗಳ ಕಲಾಕೃತಿ ಪ್ರದರ್ಶನ ಮತ್ತು ರಾಷ್ಟ್ರಮಟ್ಟದ ಕರಕುಶಲ ಕಲೆಗಳ ಪ್ರದರ್ಶನ ಕಾರ್ಯಕ್ರಮವನ್ನು, ಸಂಜೆ 5 ಗಂಟೆಗೆ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಪುಸ್ತಕ ಮೇಳ ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಉದ್ಘಾಟಿಸಲಿದ್ದಾರೆ.

ಸಂಜೆ 5:30 ಗಂಟೆಗೆ ನಗರದ ಕಲಾಮಂದಿರದಲ್ಲಿನ ರಂಗಾಯಣದ ಭೂಮಿಗೀತದ ರಂಗ ಮಂದಿರದಲ್ಲಿ “ನವರಾತ್ರಿ ಜಾನಪದ ರಂಗ ಉತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನೂ ಸಹ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ.

ಸಂಜೆ 6 ಗಂಟೆಗೆ ಅರಮನೆಯ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ.

ಸಂಜೆ 6.30ಕ್ಕೆ ವಿದ್ಯುತ್ ದೀಪಲಂಕಾರ “ವಿದ್ಯುತ್ ರಥ”ಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಚಾಲನೆ ನೀಡಲಿದ್ದಾರೆ. ರಾತ್ರಿ 7.30ಕ್ಕೆ ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಲಾಗಿರುವ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ವಿವಿಧ ಸಚಿವರು ಭಾಗವಹಿಸಲಿದ್ದಾರೆ.

error: Content is protected !!