ಬೆಂಗಳೂರು: ಪಿ.ಜಿ (ಮಹಿಳಾ ಪೇಯಿಂಗ್ ಗೆಸ್ಟ್) ಒಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಜು.23ರಂದು ತಡರಾತ್ರಿ ಕೋರಮಂಗಲದ ವಿ.ಆರ್.ಲೇಔಟ್‌ನಲ್ಲಿ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಿಹಾರ ಮೂಲದ ಕೃತಿ ಕುಮಾರಿ (24) ನಿನ್ನೆ ಪಿಜಿಯಲ್ಲಿದ್ದ ಸಂದರ್ಭದಲ್ಲಿ ತಡರಾತ್ರಿ 11.10ರ ಸುಮಾರಿಗೆ ಹತ್ಯೆಯಾಗಿದ್ದಾಳೆ.
ಚಾಕು ಹಿಡಿದು ಪಿ.ಜಿಯೊಳಗೆ ನುಗ್ಗಿದ ಆರೋಪಿ, 3ನೇ ಮಹಡಿಯಲ್ಲಿನ ರೂಮಿನ ಸಮೀಪದಲ್ಲೇ ಯುವತಿಯ ಕತ್ತು ಕೊಯ್ದು, ಕೊಲೆಮಾಡಿ ಪರಾರಿಯಾಗಿದ್ದಾನೆ. ಪರಿಚಯಸ್ಥ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಜಿಯಲ್ಲಿನ ಭದ್ರತಾ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.