ಬೆಳ್ತಂಗಡಿ: ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಗೆ ಸದಸ್ಯರು ಬಹಿಷ್ಕಾರ ಹಾಕಿದ ಘಟನೆ ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.
ಕುವೆಟ್ಟು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಜುಲೈ 15 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಬಗ್ಗೆ ನಿರ್ಣಯಿಸಲಾಗಿತ್ತು. ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಸದಸ್ಯರ ಹಾಗೂ ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಧಿಕೃತ ಕಟ್ಟಡಗಳ ಬಗ್ಗೆ ನೋಟೀಸ್ ಜಾರಿ ಮಾಡಿದರೂ ಪಂಚಾಯತ್ ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಅನುಮತಿ ಪತ್ರ ನೀಡಿದ್ದಾರೆ. ಹಾಗೂ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಮಾನ್ಯ ಸಭೆಯ ಪ್ರಾರಂಭದಲ್ಲೇ ಚರ್ಚೆ ನಡೆದು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ 24 ಸದಸ್ಯರ ಪೈಕಿ 19 ಸದಸ್ಯರು ಸಭೆಯಿಂದ ಹೊರ ನಡೆದಿದ್ದಾರೆ.ನಂತರ ಸದಸ್ಯರ ಕೋರಂ ಕೊರತೆಯಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಅಧ್ಯಕ್ಷರು ಘೋಷಿಸಿದರು.