ಮುಂಬೈ: ಐಸ್‌ಕ್ರೀಂ ತಿನ್ನುತ್ತಿರುವಾಗ ಮನುಷ್ಯನ ಬೆರಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಮಲಾಡ್ ನಿವಾಸಿ ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಅವರು ಆನ್‌ಲೈನ್‌ನಲ್ಲಿ 3 ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ಮನೆ ತಲುಪಿದ ಐಸ್‌ಕ್ರೀಂ ನಲ್ಲಿ ಇವರು ಬಟರ್‌ಸ್ಕಾಚ್ ಫ್ಲೇವರ್ ಐಸ್‌ಕ್ರೀಂ ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಹಲ್ಲಿಗೇನೋ ತಾಗಿದಂತೆ ಅನುಭವಾಯಿತು. ಮೊದಲು ಇವರು ಅದು ವಾಲ್ನಟ್ ಅಥವಾ ಚಾಕೊಲೇಟ್ ಇರಬೇಕು ಎಂದುಕೊಂಡಿದ್ದಾರೆ. ಆದರೂ ಒಮ್ಮೆ ಬಾಯಿಂದ ಉಗುಳಿ ನೋಡಿದಾಗ ಅದು ವಾಲ್ನಟ್ ಆಗಿರಲಿಲ್ಲ, ಬದಲಾಗಿ ಮನುಷ್ಯನ ಬೆರಳಾಗಿತ್ತು.
ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ವೈದ್ಯರಾಗಿದ್ದ ಕಾರಣ ಇದು ಹೆಬ್ಬರಳಿನ ಭಾಗ ಎಂಬುದನ್ನು ಖಚಿತಪಡಿಸಿಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬೆರಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ತನಿಖೆಗೆ ಮುಂದಾಗಿದ್ದಾರೆ. ಐಸ್‌ಕ್ರೀಂನಲ್ಲಿ ಬೆರಳು ಎಲ್ಲಿಂದ ಬಂತು ಎಂಬುದೇ ಆಶ್ಚರ್ಯದ ಸಂಗತಿಯಾಗಿದೆ.