ಮಧ್ಯಪ್ರದೇಶ: ಗೆಳೆಯನ ಜೊತೆ ವಿದೇಶದಲ್ಲಿ ಸುತ್ತಾಡಲು ಪ್ಲಾನ್ ಮಾಡಿದ ಯುವತಿಯೋರ್ವಳು ಹಣಕ್ಕಾಗಿ ಅಪಹರಣದ ನಾಟಕವಾಡಿ ತಂದೆ ಬಳಿ ಮೂವತ್ತು ಲಕ್ಷಕ್ಕೆ ಬೇಡಿಕೆ ಇಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಯುವತಿ ಕಾವ್ಯ (21) ನೀಟ್ ಪರೀಕ್ಷಾ ತಯಾರಿ ನಡೆಸುವುದಾಗಿ ತನ್ನ ತಾಯಿಯ ಜೊತೆ ರಾಜಸ್ಥಾನದ ಕೋಟಕ್ಕೆ ಬಂದು ಅಲ್ಲಿನ ಹಾಸ್ಟೆಲ್ ನಲ್ಲಿ ತಂಗಿದ್ದಳು. ಬಳಿಕ ತಾಯಿ ಊರಿಗೆ ಮರಳಿದ್ದು, ಈ ವೇಳೆ ಕಾವ್ಯ ಹಾಸ್ಟೆಲ್ ನಲ್ಲಿ ಕೇವಲ 3 ದಿನಗಳ ಕಾಲ ಮಾತ್ರ ಇದ್ದು ಬಳಿಕ ಸ್ನೇಹಿತರೊಂದಿಗೆ ಇಂದೋರ್ ಗೆ ತೆರಳಿದ್ದಾಳೆ. ಅಲ್ಲಿ ತನ್ನ ಸ್ನೇಹಿತರ ಜೊತೆ ಉಳಿದುಕೊಂಡು ವಿದೇಶಕ್ಕೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದಾಳೆ. ಆದರೆ ವಿದೇಶಕ್ಕೆ ಹೋಗಲು ಹೆಚ್ಚಿನ ಹಣದ ಅವಶ್ಯಕತೆ ಇದ್ದುದರಿಂದ ಆಕೆ ಮತ್ತು ಆಕೆಯ ಸ್ನೇಹಿತರು ಸೇರಿ ಅಪಹರಣದ ನಾಟವಾಡುವ ಯೋಜನೆ ರೂಪಿಸಿದ್ದಾರೆ.
ಕಾವ್ಯ ತನ್ನನ್ನು ಹಗ್ಗದಿಂದ ಕಟ್ಟಿದ ರೀತಿಯಲ್ಲಿ ಫೋಟೋ ತೆಗೆಸಿಕೊಂಡು, ಆ ಫೋಟೋವನ್ನು ತನ್ನ ತಂದೆಗೆ ವಾಟ್ಸ್ ಆಪ್ ಮೂಲಕ ರವಾನಿಸಿದ್ದು ಅದರ ಜೊತೆಗೆ ‘ನಿಮ್ಮ ಮಗಳು ಅಪಹರಣವಾಗಿದ್ದಾಳೆ ಆಕೆಯನ್ನು ವಾಪಸು ಕಳುಹಿಸಬೇಕಾದರೆ ನಮಗೆ 30 ಲಕ್ಷ ಹಣ ನೀಡಬೇಕು ಎಂದು’ ಮೆಸೇಜ್ ಮಾಡಿದ್ದಳು. ವಾಟ್ಸ್ ಆಪ್ ನೋಡಿದ ಕಾವ್ಯ ತಂದೆಗೆ ಆಘಾತಗೊಂಡು ಮಧ್ಯಪ್ರದೇಶದಲ್ಲಿರುವ ಪೊಲೀಸ್ ಠಾಣೆಗೆ ತೆರಳಿ ತನ್ನ ಮಗಳು ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ವಿಚಾರವನ್ನು ರಾಜಸ್ಥಾನದ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ತಕ್ಷಣ ಅಲರ್ಟ್ ಆದ ರಾಜಸ್ಥಾನ ಪೊಲೀಸರು ಆಕೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆಕೆ ವಾಸವಿದ್ದ ಹಾಸ್ಟೆಲ್ ಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದು, ಆಗ ಅವಳು ಹಾಸ್ಟೆಲ್ ಬಿಟ್ಟಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರು ಎಲ್ಲಾ ಕಡೆಯ ಸಿಸಿ ಕ್ಯಾಮೆರಾ ಪರಿಶೀಲಿಸಿದ ವೇಳೆ ಅಪಹರಣವಾಗುವ 3 ಗಂಟೆಯ ಮೊದಲು ಜೈಪುರದ ದುರ್ಗಾಪುರದಲ್ಲಿರುವ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಳೆ. ನಂತರ ಪೊಲೀಸರು ಆಕೆಯ ಸ್ನೇಹಿತರನ್ನು ಪತ್ತೆ ಹಚ್ಚಿ ವಿಚಾರಿಸಿದ್ದಾರೆ. ಈ ವೇಳೆ ಅವರು ಸತ್ಯ ಬಾಯಿ ಬಿಟ್ಟಿದ್ದಾರೆ. ಆಕೆ ಮತ್ತು ಆಕೆಯ ಗೆಳೆಯ ವಿದೇಶಕ್ಕೆ ತಿರುಗಾಡಲು ಹೋಗುವ ಉದ್ದೇಶದಿಂದ ಅಪಹರಣದ ನಾಟಕವಾಡಿ 30 ಲಕ್ಷಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವ ಪ್ಲಾನ್ ಮಾಡಿದ್ದರು ಎಂದು ಸತ್ಯ ಒಪ್ಪಿಕೊಂಡಿದ್ದಾರೆ.