ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮತ್ತು ಆಕೆಯ ಕುಟುಂಬ ಸದಸ್ಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿ ಹೊರಡಿಸಿದ ಆದೇಶವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾ.ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಈ ತೀರ್ಪು ಹೊರಹಾಕಿದ್ದು ಈ ರೀತಿಯ ಬಿಡುಗಡೆ ಆದೇಶ ಹೊರಡಿಸುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ. ಈ ಅಧಿಕಾರ ಇರುವುದು ಮಹಾರಾಷ್ಟ್ರ ಸರ್ಕಾರಕ್ಕೆ ಎಂದು ಕೋರ್ಟ್ ಹೇಳಿದೆ. ಆರೋಪಿಗಳ ವಿಚಾರಣೆ ಮತ್ತು ಜೈಲುವಾಸ ನಡೆದ ಸ್ಥಳದಲ್ಲಿಯೇ ಬಿಡುಗಡೆ ಅರ್ಜಿಗಳ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಗುಜರಾತ್ ಸರ್ಕಾರವು 2022ರ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಕೋರ್ಟ್, ಗುಜರಾತ್ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸದೆ ಅಪರಾಧಿಗಳನ್ನು ಬಿಡುಗಡೆ ಮಾಡುವುದು ಸರಿಯಲ್ಲ . ಬಿಡುಗಡೆಗೂ ನೀಡುವ ಮುನ್ನ ಅಪರಾಧಿಗಳ ಅಪರಾಧದ ಗಂಭೀರತೆಯನ್ನು ಪರಿಶೀಲಿಸಬೇಕು. ಇಂಥ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳು ಮುಂದಿನ ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆಯೂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಘಟನೆಯ ವಿವರ:
2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ 21 ವರ್ಷದ ಬಿಲ್ಕಿಸ್ ಬಾನೊ ಐದು ತಿಂಗಳ ಗರ್ಭಿಣಿಯಾಗಿದ್ದರು. ಈ ವೇಳೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮೂರು ವರ್ಷದ ಮಗಳು ಸೇರಿದಂತೆ ಬಿಲ್ಕಿಸ್ ಕುಟುಂಬದ ಏಳು ಸದಸ್ಯರು ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣದಲ್ಲಿ 11 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಗುಜರಾತ್ ಸರ್ಕಾರವು 2022ರ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಬಿಡುಗಡೆ ಮಾಡಿತ್ತು.