ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಗೆ ₹ 3 ಸಾವಿರ ಕೋಟಿ ರೂಪಾಯಿ ಮೀಸಲು ಖಂಡನೀಯ: ರಾಜ್ಯ ಬಜೆಟ್‍ನಲ್ಲಿ ತುಳುನಾಡನ್ನು ಬರಡು ಭೂಮಿಯಾಗಿಸುವ ವ್ಯವಸ್ಥಿತ ಷಡ್ಯಂತ್ರ: ಜಿಲ್ಲೆಯ ಸಂಸದರು, ಶಾಸಕರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬದ್ಧತೆ ಪ್ರದರ್ಶಿಸಲಿ: ತುಳುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಹೇಳಿಕೆ

 

ಬೆಳ್ತಂಗಡಿ: ತುಳುನಾಡಿನ ಜೀವನಾಡಿಗೆ ಮಾರಕವಾದ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಗೆ ಕರ್ನಾಟಕ ರಾಜ್ಯ ಬಜೆಟ್‍ನಲ್ಲಿ 3000ಕೋಟಿ ರೂಪಾಯಿ ಮೀಸಲಿರಿಸಿದ್ದು ಖಂಡನೀಯ. ಈ ಮೂಲಕ ತುಳುನಾಡನ್ನು ಬರಡು ಭೂಮಿಯಾಗಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಮುಂದುವರಿಸಿದ್ದು ತುಳುವರಿಗೆ ಎಚ್ಚರಿಕೆ ಗಂಟೆಯಾಗಿದೆ. ತುಳುವರ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟದಲ್ಲಿ ನುಸುಳಿ ನಾಟಕವಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಮತ್ತು ಶಾಸಕರು ಈ ಕೂಡಲೇ ತಮ್ಮ ಶಾಸಕ/ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಬದ್ಧತೆಯನ್ನು ನಾಡಿನ ಜನಕ್ಕೆ ತೋರಿಸಬೇಕು. ನಿರಂತರವಾಗಿ ತುಳುನಾಡಿನ ನೆಲ, ಜಲ, ಭಾಷೆಯ ಮೇಲೆ ಪ್ರಹಾರ ನಡೆಸುತ್ತಿರುವ ಕರ್ನಾಟಕ ರಾಜ್ಯವು ನಾಡಿನ ಅಸ್ಮಿತೆಯನ್ನು ಅಳಿಸುವ ಪ್ರಯತ್ನದಲ್ಲಿ ನಿರತವಾಗಿದೆ. ರಾಷ್ಟ್ರೀಯ ಪಕ್ಷಗಳ ಈ ರೀತಿಯ ನಾಡ ವಿರೋಧಿ ಧೋರಣೆಗೆ ತುಳುವರು ತಕ್ಕ ಪ್ರತ್ಯುತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದಾರೆ ಎಂದು ತುಳುವೆರೆ ಪಕ್ಷದ ಅಧ್ಯಕ್ಷರಾದ ಶೈಲೇಶ್ ಆರ್.ಜೆ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!