ಪಂಜಾಬ್​ನಲ್ಲಿ ಭದ್ರತಾ ವೈಫಲ್ಯ ಅನುಭವಿಸಿದ ಪ್ರಧಾನಿ ನರೇಂದ್ರ ಮೋದಿ: ಫಿರೋಜ್​ಪುರ್​​ನಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಭಾಗವಹಿಸದೆ ಪಿ.ಎಂ. ದೆಹಲಿಗೆ ವಾಪಸ್!: ಸುಮಾರು 20 ನಿಮಿಷಗಳ ಕಾಲ ಬೆಂಗಾವಲು ಪಡೆಯೊಂದಿಗೆ ಫ್ಲೈಓವರ್‌ ಮೇಲೆ ಸ್ಥಗಿತ

 

ಬೆಂಗಳೂರು: ಪಂಜಾಬ್​​ನ ಫಿರೋಜ್​ಪುರ್​​ನಲ್ಲಿ ಆಯೋಜನೆ ಮಾಡಲ್ಪಟ್ಟಿದ್ದ ರ್‍ಯಾಲಿಯಲ್ಲಿ ಭಾಗಿಯಾಗಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯ ಅನುಭವಿಸಿದ್ದು, ಇದೇ ಕಾರಣಕ್ಕಾಗಿ ಸಭೆಯಲ್ಲಿ ಭಾಗಿಯಾಗದೇ ದೆಹಲಿಗೆ ವಾಪಸ್​ ಆಗಿದ್ದಾರೆ.
ಪಂಜಾಬ್​​ನ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಫಿರೋಜ್‌ಪುರಕ್ಕೆ ಪ್ರಧಾನಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಬೆಂಗಾವಲು ಪಡೆಯೊಂದಿಗೆ ಮೋದಿ ಫ್ಲೈಓವರ್‌ವೊಂದರಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಜೀವಂತವಾಗಿ ಏರ್​ಪೋರ್ಟ್​ವರೆಗೂ ಬಂದಿರುವುದಕ್ಕೆ ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ’ ಎಂದು ಚಾಟಿ ಬೀಸಿದ್ದಾರೆ.
ಪಂಜಾಬ್​ನಲ್ಲಿ ಮೋದಿಗೆ ಬಹುದೊಡ್ಡ ಭದ್ರತಾ ವೈಫಲ್ಯ ಎದುರಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಸಿಎಂ ಕ್ಯಾ. ಅಮರೀಂದರ್​ ಸಿಂಗ್​, ಪಂಜಾಬ್​​ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದು, ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿ. ಮೀ. ದೂರದಲ್ಲಿರುವ ಪ್ರದೇಶದಲ್ಲಿ ದೇಶದ ಪ್ರಧಾನಿಗೆ ಸುಗಮ ಸಂಚಾರ ಒದಗಿಸುವಲ್ಲಿ ಪಂಜಾಬ್​ ವಿಫಲಗೊಂಡಿರುವ ನಿಮಗೆ ಅಧಿಕಾರ ನಡೆಸಲು ಅರ್ಹತೆ ಇಲ್ಲ ಎಂದಿದ್ದಾರೆ. ಜೊತೆಗೆ ತಕ್ಷಣವೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

error: Content is protected !!