ತಾಲೂಕಿನ ವಿವಿಧೆಡೆ ಬೆಳ್ತಂಗಡಿ ತಹಶೀಲ್ದಾರ್ ಕಾರ್ಯಾಚರಣೆ: 37 ಎಕರೆಗೂ ಹೆಚ್ಚು ಅತಿಕ್ರಮಿತ ಜಮೀನು ವಶಕ್ಕೆ!: ಅತಿಕ್ರಮಣಕಾರರಿಗೆ ಸಂಕಟ, ಸಾರ್ವಜನಿಕರಿಂದ ಶ್ಲಾಘನೆ

 

ಬೆಳ್ತಂಗಡಿ: ಕಾನೂನು ಬಾಹಿರವಾಗಿ ಮಾಡಿದ್ದ ಭೂಮಿ ಅತಿಕ್ರಮಣವನ್ನು ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ. ಅವರು ಭರ್ಜರಿ ಕಾರ್ಯಾಚರಣೆ ನಡೆಸಿ ಅತಿಕ್ರಮಣಕಾರರಿಗೆ ಬಿಸಿಮುಟ್ಟಿಸಿ, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಂದಾಯ ಇಲಾಖೆಯ ಭೂಮಿಯನ್ನು ಸುಪರ್ದಿಗೆ ಪಡೆದಿದ್ದಾರೆ. ಈ ಮೂಲಕ ಘಟಾನುಘಟಿ ಅತಿಕ್ರಮಣಕಾರರಿಗೆ ಬಿಸಿಮುಟ್ಟಿಸಿದ ತಹಸೀಲ್ದಾರ್ ಮಹೇಶ್ ಜೆ. ಅವರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

 

 

ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ. ಆರಂಭದಲ್ಲಿ ಅತಿಕ್ರಮಣದಾರರಿಗೆ ನೋಟಿಸ್ ನೀಡಿ ಮೌನದಲ್ಲಿದ್ದು, ಇದೀಗ ಕಂದಾಯ ಅಧಿಕಾರಿಗಳ ಜತೆಗೂಡಿ ಅಲ್ಲಲ್ಲಿ ಕಾರ್ಯಾಚರಣೆ ಮಾಡಿ ಅತಿಕ್ರಮಣ ತೆರವುಗೊಳಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಕಂದಾಯ ಇಲಾಖೆಗೆ ಸೇರಿದ್ದ ಭೂಮಿಯನ್ನು ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ನೇತೃತ್ವದಲ್ಲಿ ಕೈಗೊಂಡ ಕಾರ್ಯಾಚರಣೆಯಲ್ಲಿ ಕೆಲವೇ ದಿನದೊಳಗೆ 37.2 ಎಕರೆ‌ ಭೂಮಿ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲೇ ಇತಿಹಾಸದಲ್ಲೇ ತಹಸೀಲ್ದಾರೊಬ್ಬರು ಅತಿಕ್ರಮಣಗೊಂಡ ಹೆಚ್ಚು ಭೂಮಿಯನ್ನು ಸರ್ಕಾರದ ಸುಪರ್ದಿಗೆ ತಂದಿರುವ ಹೆಗ್ಗಳಿಕೆಯಾಗಿದೆ.
ಶಾಲಾ ಆಟದ ಮೈದಾನ, ವಿವಿಧ ಅಭಿವೃದ್ಧಿ ಕಾಮಗಾರಿಗೆ ಮೀಸಲಿರಿಸಿದ ಭೂಮಿ ಕಳೆದ 10 ವರ್ಷಗಳಿಂದ ಅತಿಕ್ರಮಣಗೊಂಡಿರುವ ಬಗ್ಗೆ ಕಂದಾಯ ಇಲಾಖೆಗೆ ಈ ಹಿಂದೆ ದೂರುಗಳು ಬಂದಿದ್ದವು. ಮಹೇಶ್ ಜೆ. ಅವರು ಕಂದಾಯ ಭೂಮಿಯ ಪರಿಶೀಲನೆ ನಡೆಸಿ, ಹಲವು ಅತಿಕ್ರಮಣಕಾರರಿಗೆ ನೋಟಿಸ್ ನೀಡಿ ಜಾಗ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ಬಹುತೇಕ ಅತಿಕ್ರಣಕಾರರು ನೋಟಿಸ್ ಹಾಗೂ ಮನವಿಗೆ ಕ್ಯಾರೇ ಮಾಡದ ಹಿನ್ನೆಲೆ ಕಂದಾಯ ಅಧಿಕಾರಿಗಳ ಜತೆಗೂಡಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು.

 

 

ಶಾಲಾ ಆಟದ ಮೈದಾನ 23 ಕುಟುಂಬಗಳಿಂದ ಕಬಳಿಕೆ
ಈಗಾಗಲೇ ಅಭಿವೃದ್ದಿ ಕಾಮಗಾರಿಗಳಿಗೆ, ಮೈದಾನ, ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಮೀಸಲಾಗಿರಿಸಿದ ಭೂಮಿಯೂ ಅತಿಕ್ರಮಣಗೊಂಡ ಬಗ್ಗೆ ದೂರು ನೀಡಲಾಗಿತ್ತು. ಇತ್ತೀಚೆಗೆ ವೇಣೂರು ವಿಭಾಗದ ಕಂದಾಯ ಅಧಿಕಾರಿ ಎಂ.ಎನ್. ರವಿ ಅವರ ವ್ಯಾಪ್ತಿಯಲ್ಲಿ ಶಾಲಾ ಆಟದ ಮೈದಾನವನ್ನು 23 ಕುಟುಂಬಗಳು ಕಾನೂನು ಬಾಹಿರವಾಗಿ ಅತಿಕ್ರಮಿಸಿರುವ ಬಗ್ಗೆ ತಹಸಿಲ್ದಾರ್ ಅವರಿಗೆ ವರದಿಯನ್ನೂ ಸಲ್ಲಿಸಿದ್ದರು, ಈ ವರದಿಯ ಆಧಾರದಲ್ಲೂ ತೆರವು ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ಮಹೇಶ್ ಅವರು 2.30 ಎಕರೆ ಭೂಮಿಯನ್ನು ಶಾಲೆಯ ಸುಪರ್ದಿಗೆ ನೀಡಿದ್ದಾರೆ.
ಬೆಳ್ತಂಗಡಿ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆ
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಸರ್ವೆ ನಂ. 113/1ರಲ್ಲಿ 10 ಎಕರೆ, ಪುತ್ತಿಲ ಗ್ರಾಮದ ಸರ್ವೆ ನಂ. 47/1ರಲ್ಲಿ 3.5 ಎಕರೆ, ಕಳಂಜ ಗ್ರಾಮದ ಸರ್ವೆ ನಂ. 29/2ರಲ್ಲಿ 1.1 ಎಕರೆ ಹಾಗೂ ಸರ್ವೆ ನಂ. 30ರಲ್ಲಿ 4.75 ಎಕರೆ, ಮಚ್ಚಿನ ಗ್ರಾಮದ ಸರ್ವೆ ನಂ. 188/2ರಲ್ಲಿ 2.77 ಎಕರೆ ಹಾಗೂ ಸರ್ವೆ ನಂ. 199/1ರಲ್ಲಿ 2 ಎಕರೆ, ಸವಣಾಲು ಗ್ರಾಮದ ಸರ್ವೆ ನಂ. 31 ಹಾಗೂ 81ರಲ್ಲಿ ಒಟ್ಟು 5 ಎಕರೆ, ಕರಿಮಣೇಲು ಗ್ರಾಮದ ಸರ್ವೆ ನಂ. 114/2ರಲ್ಲಿ 2.30 ಎಕರೆ ಭೂಮಿ ಅತಿಕ್ರಮಣಗೊಂಡಿದ್ದು, ಕಾರ್ಯಾಚರಣೆ ನಡೆಸಿ ಒಟ್ಟು 37.2 ಎಕರೆ ಕಂದಾಯ ಭೂಮಿಯನ್ನು ತೆರವುಗೊಳಿಸಿದೆ‌.
ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸುವುದು ಸೇರಿದಂತೆ ಇನ್ನಿತರ ಚಟುವಟಿಕೆ ನಡೆಸುವುದು ಕಾನೂನು ಬಾಹಿರ. ಈಗಾಗಲೇ ಅತಿಕ್ರಮಣಕಾರರಿಗೆ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಡೆಗಳಲ್ಲಿ ಅತಿಕ್ರಮಣ ಪತ್ತೆ ಹಚ್ಚಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ತಿಳಿಸಿದ್ದು, ಅತಿಕ್ರಮಣಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

error: Content is protected !!